ADVERTISEMENT

‘ಮಗಳೂರು’ ಅಲ್ಲ ಮುಗುಳಿ

​ಪ್ರಜಾವಾಣಿ ವಾರ್ತೆ
Published 30 ಮೇ 2017, 19:30 IST
Last Updated 30 ಮೇ 2017, 19:30 IST

ಚಿಕ್ಕಮಗಳೂರು ಸ್ಥಳನಾಮಕ್ಕೆ ಸಂಬಂಧಿಸಿದಂತೆ ಸಂಪತ್ ಬೆಟ್ಟಗೆರೆ ಮತ್ತು ಡಾ.ಈಶ್ವರ ಶಾಸ್ತ್ರಿ ಅವರು ತಮ್ಮ ಅಭಿಪ್ರಾಯವನ್ನು ಭಾವ ಮತ್ತು ನೆನಪು ಆಧಾರದ ಮೇಲೆ ಐತಿಹ್ಯವನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. (ವಾ.ವಾ. ಮೇ 29 ಮತ್ತು 30) ಬೆಟ್ಟಗೆರೆ ಅವರು ‘ಮ’ ಮತ್ತು ‘ಗ’ ಕ್ಷರಗಳ ಮಧ್ಯೆ ಬಿಂದು (0)ವನ್ನು ಸೇರಿಸಬಾರದು ಎಂಬ ಮನವಿ ಇಟ್ಟರೆ, ಶಾಸ್ತ್ರಿ ಅವರು (ಮಂ)ಜ ಕಾರವು (ಮಂ)ಗ ಕಾರ ಆಗಿರುವುದನ್ನು ಉಲ್ಲೇಖಿಸುತ್ತಾರೆ.

ಆದರೆ 1998ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯು ಪ್ರಕಟಿಸಿರುವ ಎಪಿಗ್ರಾಫಿಯ ಕರ್ನಾಟಿಕ ಸಂಪುಟ 11ರ ಪೀಠಿಕೆಯ ವ್ಯಕ್ತಿ ಮತ್ತು ಸ್ಥಳನಾಮಗಳು ಕುರಿತ ಭಾಗದಲ್ಲಿ ಇದಕ್ಕೆ ಸ್ಪಷ್ಟತೆ ಸಿಗುತ್ತದೆ.

ಅಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ; ‘ಚಿಕ್ಕಮಗಳೂರು ಮತ್ತು ಹಿರಿಯಮಗಳೂರು ಎನ್ನುವ ಸ್ಥಳನಾಮಗಳು ಶಾಸನಗಳಲ್ಲಿ (ಚಿಮ 1, 3, 74) ಅನುಕ್ರಮವಾಗಿ ಕಿರಿ ಮುಗುಳಿ ಮತ್ತು ಹಿರಿಮುಗುಳಿ ಎಂಬ ರೂಪದಲ್ಲಿ ಕಾಣಬರುತ್ತವೆ. ಈ ಎರಡೂ ಅಗ್ರಹಾರ ಗ್ರಾಮಗಳು. ಕ್ರಿ.ಶ. 8–9 ನೆಯ ಶತಮಾನಕ್ಕೆ ಸೇರಿದ ಗಂಗರ ಶಾಸನದಲ್ಲಿ (ಚಿಮ 72) ಈ ಎರಡನೆಯ ಸ್ಥಳವು ಹಿರಿಮುಗುಳಿ ಅಗ್ರಹಾರವೆಂದು ಕರೆಯಲ್ಪಟ್ಟಿದೆ.

ADVERTISEMENT

ಕ್ರಿ.ಶ.899ರ ಗಂಗರ ಶಾಸನದಲ್ಲಿ (ಚಿಮ 3) ಚಿಕ್ಕಮಗಳೂರು ಕಿರಿಮುಗುಳಿ ಅಗ್ರಹಾರವಾಗಿ ಕಾಣಿಸಿಕೊಂಡಿದೆ. ಮುಗುಳಿ ಎನ್ನುವ ಪದಕ್ಕೆ ಮುಳ್ಳಿನ ಗಿಡ, ಎತ್ತರದ ಪ್ರದೇಶ ಎಂಬ ಅರ್ಥಗಳಿವೆ’.
-ಗಿರೀಶ್ ಮೂಗ್ತಿಹಳ್ಳಿ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.