ತಾಯ್ನುಡಿ ಪರ ಯುದ್ಧ (ಪ್ರ.ವಾ. ಸೆ.17) ಸಾರಬೇಕೆಂದಿರುವ ನಟರಾಜ್ ಹುಳಿಯಾರರು, ‘ಮಾಧ್ಯಮದ ಸಮಸ್ಯೆ ಬಗೆಹರಿಯುವ ತನಕ ಖಾಸಗಿ ಶಾಲೆಗಳಲ್ಲಿ ಕನ್ನಡ ಮಾತೃಭಾಷೆಯ ಮಕ್ಕಳು ಕಡ್ಡಾಯವಾಗಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಯುವಂತೆ ಕಾನೂನು ಮಾಡಬೇಕು’ ಎಂದಿರುವುದು ಸರಿಯಲ್ಲ. ಇಲ್ಲಿ ಮಾತೃಭಾಷೆಯ ಪ್ರಶ್ನೆಯೇ ಬರಬಾರದು.
ಕರ್ನಾಟಕದಲ್ಲಿ ಓದುತ್ತಿರುವ ಪ್ರತಿಯೊಂದು ಮಗುವೂ ರಾಜ್ಯಭಾಷೆ ಕನ್ನಡವನ್ನು ಪ್ರಥಮ ಭಾಷೆಯಾಗಿಯೇ
ಓದಬೇಕು. ಇನ್ನುಳಿದ ಎರಡು ಭಾಷೆಗಳ ಆಯ್ಕೆ ಪೋಷಕರಿಗೆ ಬಿಟ್ಟಿದ್ದು ಎಂದಾಗಬೇಕು. ಇರುವ ಕಾನೂನುಗಳು ಏನಾದವು ಎಂಬ ಪ್ರಶ್ನೆಗೆ ಉತ್ತರ ಮಾತ್ರ ಕೇಳಬೇಡಿ; ಆದರೂ ಹೊಸ ಕಾನೂನು ಮಾಡಿ ಎಂಬುದು ಕುಚೋದ್ಯದಂತೆ ಕಾಣುತ್ತದೆ.
ಇನ್ನೂ ಮುಂದುವರೆದು ಅವರು, ‘ಕನ್ನಡಪರ ವಿದ್ಯಾರ್ಥಿಗಳು, ಬೋಧಕರು, ರಾಜಕಾರಣಿಗಳು, ಹೋರಾಟಗಾರರು
ಮನೆಮನೆಗೆ ತೆರಳಿ ಪೋಷಕರ ಮನವೊಲಿಸಬೇಕು’ ಎಂದಿದ್ದಾರೆ (ಇಲ್ಲಿ ಉದ್ದೇಶಪೂರ್ವಕವಾಗಿಯೇ ಸಾಹಿತಿಗಳನ್ನು ಕೈಬಿಟ್ಟಿರುವಂತೆ ಕಾಣುತ್ತದೆ! ಸ್ವಾಗತಾರ್ಹ ನಿರ್ಧಾರ). ಆದರೆ ಈ ಮನವೊಲಿಕೆ ಎಲ್ಲಿಂದ ಶುರುವಾಗಬೇಕು?
ನಿಮ್ಮ ಗುರಿ ಅದೇ ಗ್ರಾಮೀಣ ಪ್ರದೇಶದ, ಬಡವರ, ರೈತರ, ಕೂಲಿ–ಕಾರ್ಮಿಕರ ಮಕ್ಕಳ ಪೋಷಕರೇ ಆಗಿದ್ದರೆ ಅದು ಇನ್ನೊಂದು ದೊಡ್ಡ ಘಾತುಕತನವಾಗುತ್ತದೆ. ಅರ್ಧ ಶತಮಾನದಿಂದ ಸಾಕಷ್ಟು ಗೊಂದಲದಲ್ಲೇ ಮುಳುಗಿರುವವರನ್ನು ಮತ್ತೆ ಒಂದೆರಡು ತಲೆಮಾರು ಗೊಂದಲದಲ್ಲಿ ಮುಳುಗಿಸುವ ಮೂರ್ಖತನವೂ ಇದಾಗುತ್ತದೆ.
ಅದರ ಬದಲು, ನಗರ ಪ್ರದೇಶದ ಅದರಲ್ಲೂ ಪ್ರತಿಷ್ಠಿತ ಬಡಾವಣೆಯ ಪೋಷಕರ ಮನವೊಲಿಕೆಗೆ ಮೊದಲು ಪ್ರಯತ್ನಿಸಲಿ. ಅಲ್ಲಿ ನೀವು ಯಶಸ್ವಿಯಾದರೆ ಮಾತ್ರ ರಾಜ್ಯದಾದ್ಯಾಂತ ಈ ಮನವೊಲಿಕೆ ವಿಸ್ತರಿಸಲಿ. ಕನ್ನಡಿಗರಿಗೇ, ಕನ್ನಡವನ್ನು ಪ್ರಥಮ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಿ ಎಂದು ಮನವೊಲಿಸುವ ಸ್ಥಿತಿ ಬಂದಿರುವುದು ಕನ್ನಡದ ದುರಂತ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.