ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಖಾದಿ ಕುರಿತು ಮಾತನಾಡಿದರು. ಅವರು ಮಾಡಿದ ಭಾಷಣವನ್ನು ಮೆಚ್ಚಿ ಅಭಿಮಾನಿಗಳು ಮೋದಿಯವರಿಗೆ ಗ್ರಾಮೀಣ ಭಾರತದ ಬಗ್ಗೆ, ಖಾದಿ ಮತ್ತು ಮಹಾತ್ಮ ಗಾಂಧಿಯವರ ಬಗ್ಗೆ ಎಂತಹ ಅಭಿಮಾನವಿದೆ ಎಂಬುದನ್ನು ಸಾಬೀತು ಮಾಡಲು ಈ ಭಾಷಣವನ್ನು ಫೇಸ್‌ಬುಕ್‌ನಲ್ಲಿ ಹರಿಯಬಿಟ್ಟರು.
ಮೋದಿ ಅವರು ಖಾದಿ ಮತ್ತು ಕೈ ಮಗ್ಗದ ಬಗ್ಗೆ ಮಾತನಾಡುತ್ತಾರೆಂದ ಮೇಲೆ ಅವರ ಮಾತನ್ನು ಕೇಳದೇ ಇರಲಾಗುತ್ತದೆಯೇ? ನಾನೂ ರೇಡಿಯೊಗೆ ಕಿವಿಗೊಟ್ಟು ಅವರ ಮನದಾಳದ ಮಾತನ್ನು ಕೇಳಿದೆ. ಅವರ ಭಾಷಣದ ಗುಣಮಟ್ಟ ಕಾಲೇಜು ಮಕ್ಕಳು ಖಾದಿಯ ಬಗ್ಗೆ ಭಾಷಣ ಮಾಡಲು ಅಂತರ್ಜಾಲ ಅಥವಾ ವಿಕಿಪಿಡಿಯಾದಿಂದ ಮಾಹಿತಿ ಸಂಗ್ರಹಿಸಿ ಮಾಡಿದ ಭಾಷಣದಂತಿತ್ತು.
ಖಾದಿಯ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಷಯವನ್ನೇ ಪ್ರಧಾನಿಯೂ ಹೇಳಿದರು. ಅವರದು ನಿಜವಾದ ಮನಸ್ಸಿನಾಳದ ಮಾತಾಗಿದ್ದರೆ ಖಾದಿ ಮತ್ತು ಕೈಮಗ್ಗದ ಉತ್ಪನ್ನಗಳನ್ನು ದೇಶದ ವಿಶಿಷ್ಟ ಉತ್ಪನ್ನಗಳೆಂದು ಪರಿಗಣಿಸಲು ತಮಗಿರುವ ತೊಡಕಿನ ಬಗ್ಗೆ ಪ್ರಸ್ತಾಪಿಸಬೇಕಿತ್ತು. ಖಾದಿ ಮತ್ತು ಕೈಮಗ್ಗದ ಉತ್ಪನ್ನಗಳ ಮೀಸಲಾತಿ ಕಾನೂನಿನ ಬಗ್ಗೆ ಮಾತನಾಡಬೇಕಿತ್ತು. ಖಾದಿ ಮತ್ತು ಕೈ ಮಗ್ಗದ ಶತ್ರುಗಳು ಯಾರು, ಅವರನ್ನು ಸದೆ ಬಡಿಯುವುದು ಹೇಗೆ ಎಂಬುದನ್ನು ಪ್ರಸ್ತಾಪಿಸಬೇಕಿತ್ತು.
ಖಾದಿ ಮಂಡಲಿಗಳು ಮತ್ತು ಆಯೋಗದ ಭ್ರಷ್ಟತೆಯನ್ನು ಸರಿಪಡಿಸಲು ಇರುವ ತೊಂದರೆ ಏನು, ಮಂಡಲಿ ಮತ್ತು ಆಯೋಗದ ಸಿಬ್ಬಂದಿಯು ಖಾದಿ ಮತ್ತು ಕೈಮಗ್ಗ ನೇಕಾರರ ಹಿತಕ್ಕಾಗಿ ಹೇಗೆ ಸ್ನೇಹಪರವಾಗಬೇಕು, ನೂಲುಗಾರರಿಗೆ, ನೇಕಾರರಿಗೆ ಸಲ್ಲಬೇಕಾದ ಸವಲತ್ತುಗಳು ಶೀಘ್ರಗತಿಯಲ್ಲಿ ಸಲ್ಲಲು ಕೈಗೊಳ್ಳಬೇಕಾದ ಕ್ರಮ, ನಕಲಿ ಖಾದಿ ಮತ್ತು ಕೈಮಗ್ಗದ ಉತ್ಪನ್ನಗಳಿಗೆ ಕಡಿವಾಣ ಹಾಕಲು ತಾವು ಕೈಗೊಂಡಿರುವ ಕ್ರಮ ಏನು ಎಂಬುದನ್ನು ಚರ್ಚಿಸಬೇಕಿತ್ತು.
ಕೈಮಗ್ಗ ಮೀಸಲಾತಿ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ನೀಡಲು ಅಧಿಕಾರಿಗಳಿಗೆ ಸೂಚಿಸಬೇಕಿತ್ತು. ಬದಲಿಗೆ ಹಾವೂ ಸಾಯದೆ ಕೋಲೂ ಮುರಿಯದಂತೆ ಮನಸ್ಸಿಲ್ಲದ ಮನದ ಮಾತನ್ನು ಪ್ರಧಾನಿ ಆಡಿದರು. ಬೆಣ್ಣೆಯೊಳಗಿನ ಕೂದಲು ತೆಗೆಯುವಂತಿದ್ದ ಆ ಭಾಷಣವನ್ನು ಸರ್ಕಾರಿ ಸುದ್ದಿ ವಾಹಿನಿಗಳು ಇಡೀ ದಿನ ಮರು ಪ್ರಸಾರ ಮಾಡಿದವು. ಅವರ ಈ ಮಾತನ್ನು ಕೇಳಿ, ಕೇಳಿ ಎಂದು ಒಂದು ವಾರದಿಂದ ಇಲಾಖೆಗಳು ಎಸ್ಎಂಎಸ್ ಕಳುಹಿಸಿದ್ದೇನು, ಇ–ಮೇಲ್ ಹಾಕಿದ್ದೇನು, ಫೋನ್ ಮಾಡಿದ್ದೇನು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.