‘ಸೆಕ್ಯುಲರ್ ಭಾರತಕ್ಕೆ ಸತ್ಯ ತಿಳಿದಿರಬೇಕು’ (ಪ್ರ.ವಾ., ಮಾ. 15) ಲೇಖನದಲ್ಲಿ ಎ. ಸೂರ್ಯಪ್ರಕಾಶ್ ಅವರು, ‘ಭಾರತದ ಮಧ್ಯ ಯುಗದ ಇತಿಹಾಸದಲ್ಲಿ ಆಗಿನ ಮುಸ್ಲಿಂ ಅರಸರಿಂದ ಹಿಂದೂ ಸಮಾಜದವರ ಮೇಲೆ ನಡೆದ ಹಿಂಸಾಚಾರಗಳನ್ನು ನಮ್ಮ ಎಡಪಂಥೀಯ ವಿದ್ವಾಂಸರು ಮರೆಮಾಚುತ್ತಾ ಬಂದಿದ್ದಾರೆ. ಇಂದಾದರೂ ಆ ವಿಷಯದ ಬಗ್ಗೆ ಜನರಿಗೆ ಸತ್ಯ ತಿಳಿಸಬೇಕು’ ಎಂದು ಹೇಳಿದ್ದಾರೆ. ‘ಭಾರತಕ್ಕೆ ಸತ್ಯ ಗೊತ್ತಿರಬೇಕು. ಅದರ ಜೊತೆ ಸಹಬಾಳ್ವೆ ರೂಢಿಸಿಕೊಳ್ಳಬೇಕು’ ಎಂಬುದು ಅವರ ಸಲಹೆ.
ಆಧುನಿಕ ರಾಷ್ಟ್ರೀಯವಾದದ ಬಗ್ಗೆ ಚಿಂತಿಸಿದ ವಿದ್ವಾಂಸರಲ್ಲಿ ಮೊದಲಿಗರಾದ ಫ್ರೆಂಚ್ ವಿದ್ವಾಂಸ ಅರ್ನೆಸ್ಟ್ ರೆನಾನ್ (Ernest Renan, 1823-1892) ಅವರು, ‘ಒಂದು ಜನಸಮುದಾಯ ಒಂದು ರಾಷ್ಟ್ರವಾಗಿ ರೂಪುಗೊಳ್ಳಬೇಕಾದರೆ ಅದು ತನ್ನ ಗತ ಇತಿಹಾಸವನ್ನು ಮರೆಯುವುದು ಅಗತ್ಯವಾಗುತ್ತದೆ’ ಎಂದು ಹೇಳಿದ್ದಾರೆ. ಹೀಗಾಗಿ ಭಾರತದಲ್ಲಿ ಹಿಂದೂಗಳು ಮತ್ತು ಮುಸಲ್ಮಾನರು ಶಾಂತಿಯಿಂದ ಸಹಬಾಳ್ವೆ ನಡೆಸಬೇಕಾದರೆ ನಾವು ನಮ್ಮ ಗತ ಇತಿಹಾಸವನ್ನು ಮರೆತು ಮುನ್ನಡೆಯಬೇಕಾಗಿದೆ. ಸತ್ಯವನ್ನು ಎತ್ತಿ ಹಿಡಿಯುವ ನೆಪದಲ್ಲಿ ಅದನ್ನೆಲ್ಲಾ ಮತ್ತೆ ನೆನಪಿಸುವುದು ಸರಿಯಲ್ಲವೇ ಅಲ್ಲ.
ಕಳೆದ ಎರಡು ದಶಕಗಳಲ್ಲಿ ದೆಹಲಿಯ ಕೆಲವು ಬರಹಗಾರರು ಮತ್ತು ಪ್ರಕಾಶಕರು (ಉದಾ: ಊರ್ವಶಿ ಬುಟಾಲಿಯಾ) ಬ್ರಿಟಿಷ್ ಇಂಡಿಯಾದ ವಿಭಜನೆಯ ಕಾಲದಲ್ಲಿ ಭಾರತ–ಪಾಕಿಸ್ತಾನದಲ್ಲಿ ನಡೆದ ಕೋಮು ಗಲಭೆಗಳಲ್ಲಿ ನೊಂದವರ ಬದುಕನ್ನು ದಾಖಲಿಸುವುದನ್ನೇ ಒಂದು ಉದ್ಯಮವನ್ನಾಗಿ ಮಾಡಿಕೊಂಡಿದ್ದಾರೆ. ಸಮಾಜಶಾಸ್ತ್ರಜ್ಞ ದಿವಂಕರ್ ಗುಪ್ತಾ, ‘ಇಂತಹ ಪ್ರಕಟಣೆಗಳ ಅವಶ್ಯಕತೆ ಇಲ್ಲ, ಆಗಿನ ಘಟನೆಗಳು ನಮ್ಮ ನೆನಪಿನಿಂದ ಅಳಿಸಿಹೋಗುವುದೇ ನಮ್ಮ ಭವಿಷ್ಯದ ಸಮಾಜದ ಸಾಮರಸ್ಯದ ದೃಷ್ಟಿಯಿಂದ ಒಳ್ಳೆಯದು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.