ಎ. ಸೂರ್ಯಪ್ರಕಾಶ್ ಅವರ ಲೇಖನಕ್ಕೆ ಪ್ರತಿಕ್ರಿಯೆಯ ರೂಪದಲ್ಲಿ ಗಿರೀಶ್ ವಿ. ವಾಘ್ ಬರೆದ ‘ಮರೆತು ಮುನ್ನಡೆಯೋಣ’ ಪತ್ರಕ್ಕೆ (ವಾ.ವಾ., ಮಾರ್ಚ್ 21) ಈ ಪ್ರತಿಕ್ರಿಯೆ.
ಭಾರತದ ಪ್ರಗತಿಗೆ ಹಿಂದೂ–ಮುಸ್ಲಿಂ ಸಹಬಾಳ್ವೆ ಅತ್ಯಂತ ಅಗತ್ಯ ಎಂಬುದು ನಿಜ. ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದು ಖಂಡನೀಯವೇ ಹೌದು. ಆದರೆ, ಈ ದೇಶ ನೂರಾರು ವರ್ಷಗಳ ಕಾಲ ಮುಸ್ಲಿಮರ ಮತ್ತು ಬ್ರಿಟಿಷರ ಗುಲಾಮಗಿರಿಗೆ ಒಳಗಾದದ್ದು ಹೇಗೆ ಎಂದು ಪ್ರತಿ ತಲೆಮಾರೂ ಅರಿಯುವುದು ಬೇಡವೇ? ಮೊದಲು ಅರಿತರೆ ಆನಂತರ ಮರೆಯಬಹುದು.
ಮರೆಯುವುದಕ್ಕೂ ಎಡಪಂಥೀಯ ಬುದ್ಧಿಜೀವಿಗಳು ಮಾಡುತ್ತಿರುವಂತೆ ಜಾಣತನದಿಂದ ಮರೆಮಾಚುವುದಕ್ಕೂ ವ್ಯತ್ಯಾಸವಿದೆ. ಯಾರನ್ನೋ ಓಲೈಸಿ, ತಾವು ಮಹಾ ಪ್ರಗತಿಶೀಲರೆಂದು ಬಿಂಬಿಸಿಕೊಳ್ಳುವ ಇಂಥವರನ್ನೇ ಹುಸಿ ಜಾತ್ಯತೀತರೆಂದು ಕರೆಯುವುದು. ಭಾರತ ಗುಲಾಮಗಿರಿ ಅನುಭವಿಸಿದ್ದಕ್ಕೆ ಇಂಥವರ ಪುಕ್ಕಲುತನವೂ ಕಾರಣವಿದ್ದೀತು.
ಈ ದೇಶದ ಬಹುಸಂಖ್ಯಾತ ವರ್ಗಕ್ಕೆ ಸೇರಿದ ಕೆಲ ರಾಜಕೀಯ ನಾಯಕರು ಇತಿಹಾಸದ ತಪ್ಪುಗಳನ್ನೇ ಮತ್ತೆ ಮತ್ತೆ ಮಾಡುತ್ತಿರುವುದನ್ನು ನೋಡಿದಾಗ, ನಮಗೆ ಮರೆವಿಗಿಂತ ಹೆಚ್ಚಾಗಿ ಅರಿವಿನ ಅಗತ್ಯವಿದೆ ಎನ್ನಿಸುತ್ತದೆ. ಇಲ್ಲದಿದ್ದರೆ ಈ ದೇಶ ಮತ್ತೆ ಧರ್ಮ ಮತ್ತು ಭಾಷೆಯ ಆಧಾರದ ಮೇಲೆ ಛಿದ್ರವಾಗುವ ಅಪಾಯವಿದೆ. ಇತಿಹಾಸದ ಅರಿವು ವರ್ತಮಾನದ ದಾರಿದೀಪವಾಗುವಂತೆ, ಆದರೆ ಬೆಂಕಿ ಹಚ್ಚದಂತೆ ಎಚ್ಚರ ವಹಿಸುವುದು ನಮ್ಮ ಕೈಯಲ್ಲೇ ಇದೆ.
‘A person who forgets history will be condemned to repeat it’ ಎಂಬ ಜಾಣ್ನುಡಿ ಮರೆಯದಿರೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.