ಯು.ಆರ್.ಅನಂತಮೂರ್ತಿ ಅವರು ಬೆಂಗಳೂರಿನಲ್ಲಿ ಕುಡಿತದ ಮಾತನ್ನಾಡಿದಾಗ ಅವರೊಟ್ಟಿಗೆ ನಾನೂ ಇದ್ದೆ. ನಾವೆಲ್ಲರೂ ಒಟ್ಟಿಗೆ ಊಟ ಮಾಡುತ್ತಿದ್ದಾಗ ಹೀಗೇ ತಮಾಷೆಗೆ ಆ ಕುರಿತು ಮಾತನಾಡಿದ್ದರು. ಎಂ.ಚಿದಾನಂದಮೂರ್ತಿ ಅವರು ಅದನ್ನು ಅಷ್ಟು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ ಎನಿಸುತ್ತದೆ. ವಿಸ್ಕಿ ಬಗ್ಗೆ ಮಾತನಾಡಿದ್ದು ಅಪರಾಧವೇನಲ್ಲ.
ನಾವು ಹೀಗೆ ಅದನ್ನು ಮಾತನಾಡಬಾರದು ಇದನ್ನು ಮಾತನಾಡಬಾರದು ಅಂತ ಮುಚ್ಚಿಟ್ಟೇ ನಮ್ಮಲ್ಲಿ ಒಳಗೊಳಗೇ ಎಲ್ಲವನ್ನೂ ಮಾಡಿಬಿಡಬೇಕೆಂಬ ಕುತೂಹಲ ಇನ್ನೂ ಹೆಚ್ಚಾಗುವಂತೆ ಮಾಡಿಬಿಟ್ಟಿದ್ದೇವೆ. ಜೊತೆಗೆ ಇದು, ಮುಕ್ತವಾಗಿ ಮಾತನಾಡುವ ವಾತಾವರಣವನ್ನು ಹತ್ತಿಕ್ಕುವ ಪ್ರಯತ್ನವಾಗುತ್ತದೆ.
ಮೆಡಿಕಲ್ ಸ್ಟೋರಿಗೆ ಹೋಗಿ ಕಾಂಡೊಮ್ ಕೇಳಲು ಇನ್ನೂ ಹಿಂಜರಿಯುತ್ತಿದ್ದಾರೆ ನಮ್ಮ ಜನ. ಕಾಂಡೊಮ್ ಕೊಡುವವನು ಹಾಗೂ ತನ್ನ ಅಕ್ಕಪಕ್ಕ ನಿಂತವರು ಏನಂದುಕೊಳ್ಳುತ್ತಾರೋ ಎನ್ನುವ ಅಳುಕು, ನಾಚಿಕೆ. ಇಂತಹ ಮನಸ್ಥಿತಿಯಿಂದಾಗಿ ಎಚ್‌ಐವಿ ಸೋಂಕಿಗೆ ಒಳಗಾದವರ ಸಂಖ್ಯೆ ಹೆಚ್ಚುತ್ತಿದೆ.
ವಿಸ್ಕಿ ಬಗ್ಗೆ ಮಾತನಾಡಿದರೆ ಯುವ ಪೀಳಿಗೆ ಹಾಳಾಗುತ್ತದೆ ಎಂದು ಭಯಪಡುತ್ತಾ, ವಿಸ್ಕಿ ಬಗ್ಗೆ ಮಾತನಾಡಿದ್ದು ಸರಿಯೇ ಎಂದು ಕೇಳುವ ಮೂಲಕ ಮಂಗಳೂರಿನಲ್ಲಿ ‘ಅನೈತಿಕ ಪೋಲಿಸ್‌ಗಿರಿ’ ಮಾಡುವ ಪುಂಡು ಹುಡುಗರಿಗೆ ಪರೋಕ್ಷವಾಗಿ ತಾವು ಆದರ್ಶವಾಗಲಾರಿರಿ ಎಂಬುದು ಯಾವ ಗ್ಯಾರಂಟಿ? ಯಾಕೆಂದರೆ ‘ಕುಡಿಯುತ್ತಿದ್ದರು’ ಎಂಬ ಕಾರಣಕ್ಕೆ ಹೆಣ್ಣು ಮಕ್ಕಳನ್ನು ಮನ ಬಂದಂತೆ ಥಳಿಸಿದ್ದ ಸುದ್ದಿ ಹಳೆಯದೇನಲ್ಲ.
ಯುವ ಪೀಳಿಗೆ ಬಗ್ಗೆ ನಿಜವಾಗಿಯೂ ತಮಗೆ ಕಾಳಜಿಯಿದ್ದರೆ, ಕನ್ನಡದ ಹಿರಿಯ ಸಂಶೋಧಕರಾದ ತಾವು ಮೈಸೂರಿನಲ್ಲಿ ಸರ್ಕಾರಿ ಕನ್ನಡ ಶಾಲೆಯೊಂದನ್ನು ಮುಚ್ಚಿ ಅದನ್ನು ಮಠಕ್ಕೆ ಹಸ್ತಾಂತರಿಸುವ ಸಚಿವರೊಬ್ಬರ ವಿರುದ್ಧ ದಯವಿಟ್ಟು ಮಾತನಾಡಿ. ಬಡ ಯುವ ಜನಾಂಗಕ್ಕೆ ವಿದ್ಯೆ ಕೊಡಿಸಿ. ವಿಸ್ಕಿ ಬಗ್ಗೆ ಬಿಡಿ! ತಿನ್ನೋದು, ಕುಡಿಯೋದು, ಸೇದೋದು ಅವರಿಷ್ಟ. ಅದು ಯಾರಿಗೂ ಹಾನಿ ಮಾಡಬಾರದಷ್ಟೇ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.