‘ಎಂಟುನೂರು ವರ್ಷಗಳ ನಂತರ ದೆಹಲಿಯಲ್ಲಿ ಆಡಳಿತ ಹಿಂದೂಗಳ ಕೈಗೆ ಸಿಕ್ಕಿದೆ’ ಎಂದು ವಿಶ್ವ ಹಿಂದೂ ಪರಿಷತ್‌ನ ಮುಖಂಡ ಅಶೋಕ ಸಿಂಘಾಲ್ ಸಂಭ್ರಮಿಸಿದ ಬೆನ್ನಲ್ಲೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮುಖವಾಡಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ.
ಇದಕ್ಕೆ ಇತ್ತೀಚಿನ ನಿದರ್ಶನವೆಂಬಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಭಗವದ್ಗೀತೆಗೆ ರಾಷ್ಟ್ರೀಯ ಧರ್ಮಗ್ರಂಥದ ಪವಿತ್ರ ಸ್ಥಾನ–ಮಾನ ನೀಡಬೇಕೆಂಬ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ನಮ್ಮದು ಜಾತ್ಯತೀತ ರಾಷ್ಟ್ರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವೇ ನಮಗೆ ಪವಿತ್ರ ಗ್ರಂಥ’ ಎಂಬುದಾಗಿ ಇದಕ್ಕೆ ಸಮಂಜಸ ಪ್ರತಿಕ್ರಿಯೆ ನೀಡಿದ್ದಾರೆ.
ದೇಶ– ವಿದೇಶಗಳ ರಾಜಕೀಯ ನಾಯಕರ ಸೌಹಾರ್ದ ಭೇಟಿಯ ಸಂದರ್ಭದಲ್ಲಿ ತಮ್ಮತಮ್ಮ ದೇಶಗಳ ಉತ್ಕೃಷ್ಟ ಕಲಾಕೃತಿಗಳನ್ನು, ಸಾಹಿತ್ಯ– ಧರ್ಮಗ್ರಂಥಗಳನ್ನು ವಿಶ್ವಾಸ ಪೂರ್ವಕವಾಗಿ ಕೊಡುವುದು ಸರ್ವೇ ಸಾಮಾನ್ಯ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಭಗವದ್ಗೀತೆಯ ಪ್ರತಿಯನ್ನು ನೀಡಿದ್ದೂ ಈ ಹಿನ್ನೆಲೆಯಲ್ಲೇ. ಆದರೆ ಸುಷ್ಮಾ ಅವರು ಇದಕ್ಕೆ ವಿಪರೀತ ಅರ್ಥ ಕಲ್ಪಿಸಿದ್ದಾರೆ.
ಇಂಥ ರಾಷ್ಟ್ರೀಯ ಗ್ರಂಥದ ಗೌರವಕ್ಕೆ ಪಾತ್ರವಾಗಬಹುದಾದ ಶ್ರೇಷ್ಠ ಕೃತಿಗಳು ಎಲ್ಲಾ ಭಾಷೆ, ಎಲ್ಲಾ ಧರ್ಮಗಳಲ್ಲೂ ಇವೆ. ಸುಷ್ಮಾ ಅವರು ಹೇಳುವ ಪ್ರಕಾರ ವಿಶ್ವದ ಹಲವಾರು ಸಮಸ್ಯೆಗಳಿಗೆ ಗೀತೆಯ ತತ್ವಗಳಿಂದ ಪರಿಹಾರ ಸಿಗುತ್ತದೆ ಎಂಬುದು ವಿವಾದಾಸ್ಪದ. ಗೀತೆಯಲ್ಲಿ ಶ್ರೀಕೃಷ್ಣ ಬೋಧಿಸಿರುವ ‘ಸಂಪೂರ್ಣ ಶರಣು ಬಾ’ ಎಂಬ ತತ್ವವಾಗಲೀ, ಯುದ್ಧಕ್ಕೆ ವಿಮುಖನಾದ ಅರ್ಜುನನನ್ನು ಯುದ್ಧಕ್ಕೆ ಮರಳಿ ಹುರುದುಂಬಿಸುವುದಾಗಲೀ, ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡು ಎಂಬ ಊಳಿಗಮಾನ್ಯ ವ್ಯವಸ್ಥೆಯನ್ನು ಪ್ರತಿಪಾದಿಸುವ ವಿಚಾರವಾಗಲೀ ಮೌಢ್ಯದಿಂದ ಕೂಡಿದ ಮನುಷ್ಯ ವಿರೋಧಿ ಸಂಗತಿಗಳು.
ಇಂಥ ಸಂಗತಿಗಳು ಗೀತೆಯಲ್ಲಿ ಇರುವ ಒಳ್ಳೆಯ ಅಂಶಗಳ ಜೊತೆಜೊತೆಗೆ ಹಾಸುಹೊಕ್ಕಾಗಿವೆ. ಈ ವಿವಾದಾತ್ಮಕ ವಿಷಯಗಳನ್ನು ಜನಸಾಮಾನ್ಯರ ಮನಸ್ಸುಗಳಿಗೆ ತುಂಬಬೇಕೇಕೆ? ಇದು ಇಷ್ಟಕ್ಕೇ ಮುಗಿಯದೆ ಪಿ.ಎಂ.ಕೆ.ಯ ಎಸ್. ರಾಮದಾಸ್ ಹೇಳಿದಂತೆ ಪವಿತ್ರ ಬೈಬಲ್– ಕುರಾನ್ ಅನ್ನು ಅಳವಡಿಸಬೇಕೆಂದು ಆಯಾ ಧರ್ಮದವರು ಪಟ್ಟು ಹಿಡಿದರೆ ಆಗ ಶಾಲೆಗಳೆಲ್ಲಾ ಮತ– ಧರ್ಮದ ಮಠ ಕೇಂದ್ರಗಳಾಗಬೇಕಾದೀತು. ಕಾಲ ಬದಲಾಗಿದೆ.
ಭಗವದ್ಗೀತೆ ಎಂದಾ-ಕ್ಷಣ ಸ್ವಯಂ ಭಗವಂತನ ಬಾಯಿಂದಲೇ ಬಂದ ನುಡಿ, ಆದ್ದರಿಂದ ಗೀತೆ ಪವಿತ್ರ ಗ್ರಂಥವೆಂದು ಕುರುಡಾಗಿ ನಂಬುವವರು ಇದನ್ನು ವೈಚಾರಿಕ ವಿಶ್ಲೇಷಣೆಗೆ ಒಳಪಡಿಸಿದ ಹಲವಾರು ವಿದ್ವಾಂಸರ ಅಭಿಪ್ರಾಯಗಳನ್ನು ಗಮನಿಸಬೇಕು. ನಮ್ಮದು ಧರ್ಮನಿರಪೇಕ್ಷ, ಜಾತ್ಯತೀತ ಗಣರಾಜ್ಯವಾದ್ದರಿಂದ ಯಾರೂ ಯಾರೊಬ್ಬರ ಮೇಲೂ ಕಡ್ಡಾಯವಾಗಿ ಯಾವ ಮತ–ಧರ್ಮದ ಗ್ರಂಥಗಳನ್ನೂ ಹೇರಲು ಅವಕಾಶವಿಲ್ಲ.
–ಪ್ರೊ.ಎನ್.ವಿ. ಅಂಬಾಮಣಿಮೂರ್ತಿ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.