ADVERTISEMENT

ಮುಟ್ಟು ಮೈಲಿಗೆಯಲ್ಲ

ಎಸ್.ಮಂಜುನಾಥಬಳ್ಳಾರಿ
Published 13 ಏಪ್ರಿಲ್ 2016, 19:51 IST
Last Updated 13 ಏಪ್ರಿಲ್ 2016, 19:51 IST

‘ಕೆಲವು ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಿಸುವುದು ಲಿಂಗ ತಾರತಮ್ಯವಲ್ಲ, ಕೇವಲ ಧರ್ಮಾಚರಣೆಯಷ್ಟೆ’ ಎಂದಿರುವ ಚಂದ್ರಕಾಂತ ನಾಮಧಾರಿ (ವಾ.ವಾ., ಏ. 5) ಅವರ ಪತ್ರಕ್ಕೆ ನನ್ನ ಪ್ರತಿಕ್ರಿಯೆ.

ಅನಾದಿ ಕಾಲದಿಂದ ಚಾಲ್ತಿಯಲ್ಲಿರುವ ನಿಯಮವೆಂಬ ಕಾರಣಕ್ಕೆ ಅದನ್ನು ಪ್ರಶ್ನಿಸದೇ ಇರುವುದು ಮೌಢ್ಯಕ್ಕೆ ದಾರಿ ಮಾಡಿಕೊಡುತ್ತದೆ. ಸತಿ ಸಹಗಮನ, ಎಂಜಲೆಲೆಯ ಮೇಲೆ ಉರುಳುವ ವಿಕಾರ ಮಡೆಸ್ನಾನ ಇವುಗಳನ್ನು  ಪುರಾತನ ಕಾಲದಪದ್ಧತಿಗಳೆಂಬ ಕಾರಣಕ್ಕೆ ಇಂದಿನ ಆಧುನಿಕ ವೈಚಾರಿಕ ಕಾಲಘಟ್ಟದಲ್ಲಿ ಒಪ್ಪಲಾಗುವುದಿಲ್ಲ.

ಮಹಿಳೆಯರಿಗೆ ಋತುಸ್ರಾವವಾಗುವುದು ನಿಸರ್ಗ ನಿಯಮ. ಇದು ಮೈಲಿಗೆಯೂ ಅಲ್ಲ ಅಪಶಕುನವೂ ಅಲ್ಲ. ಋತುಸ್ರಾವಕ್ಕೆ ಒಳಗಾದ ಮಹಿಳೆಯರು ಇಂದು ಪ್ಯಾಡ್ ಧರಿಸಿ ತಮ್ಮ ವೈಯಕ್ತಿಕ ಶುಚಿತ್ವ ಮತ್ತು ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಋತುಚಕ್ರವೇ ಅಪರಾಧ ಮತ್ತು ಮೈಲಿಗೆಯೆಂದು ಭಾವಿಸುವ ವಿಕೃತ ಚಿಂತನೆಗಳೇ ಈ ರೀತಿಯ ಎಲ್ಲ ತಾರತಮ್ಯಕ್ಕೆ ಪ್ರಮುಖ ಕಾರಣ.

ಅಯ್ಯಪ್ಪ ಸ್ವಾಮಿ ಬ್ರಹ್ಮಚಾರಿ, ಅಂತೆಯೇ ಆತನ ದೇವಾಲಯದಲ್ಲಿ ಋತುಚಕ್ರಕ್ಕೆ ಒಳಗಾದ ಮಹಿಳೆಯರ ಪ್ರವೇಶ ನಿಷಿದ್ಧ ಎನ್ನುವುದಾದರೆ ಗಣಪತಿ, ಆಂಜನೇಯರೂ ಬ್ರಹ್ಮಚಾರಿಗಳೆ. ಇನ್ನು ಕೆಲ ದೇವಾಲಯಗಳಲ್ಲಿ ಪುರುಷರು ಅಂಗಿ ಕಳಚುವಂತೆ ಮಾಡುವುದು ಅವರು ಜನಿವಾರಧಾರಿಗಳೇ ಅಲ್ಲವೇ ಎಂಬುದನ್ನು ಖಾತರಿಪಡಿಸಿಕೊಳ್ಳಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT