ADVERTISEMENT

ಮೇಧಾವಿ ಖದೀಮರಿದ್ದಾರೆ!

ತಾರಾಶೋಭ ಕಿರಣ್, ಉಡುಪಿ
Published 16 ಫೆಬ್ರುವರಿ 2015, 19:30 IST
Last Updated 16 ಫೆಬ್ರುವರಿ 2015, 19:30 IST

ಇದೇ ತಿಂಗಳ ೧೪ರಂದು ನನ್ನ ಮೊಬೈಲ್‌ಗೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಳವಳ ಹುಟ್ಟಿಸುವ  ಮೂರು ಎಸ್ಎಂಎಸ್‌ಗಳು ಬಂದವು. ಸಂದೇಶಗಳ ಸಾರಾಂಶ ಇಂತಿದೆ. ತಮಗೆ ನೀಡಿರುವ ಮಿತಿಗಿಂತ ಅಧಿಕ ಮೊತ್ತದ ವ್ಯವಹಾರಕ್ಕೆ ಪ್ರಯತ್ನಿಸಿದ್ದೀರಿ. ಖದೀಮರು ಪ್ರಥಮ ಬಾರಿ ₨ ೩೮,೨೮೦ ಮತ್ತು ₨ ೨೦,೦೦೦ ಮೊತ್ತದ ವ್ಯವಹಾರಕ್ಕೆ ಪ್ರಯತ್ನಿಸಿದ ಕಾರಣ Transaction declined ಆಗಿದೆ ಮತ್ತು ಕಾರ್ಡಿನ  ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

ಲಭ್ಯವಿರುವ ಮಿತಿ ₨ ೧೫,೩೯೨  ಮಾತ್ರ ಎಂಬ ಸಂದೇಶಗಳನ್ನು ರವಾನಿಸಿದ್ದಾರೆ. ವಿಪರ್ಯಾಸ ಅಂದರೆ ನನ್ನ ಕ್ರೆಡಿಟ್ ಕಾರ್ಡು ನನ್ನ ಸ್ವಾಧೀನದಲ್ಲಿಯೇ ಇದ್ದು ಅದನ್ನು ಉಪಯೋಗಿಸಿ ನಾನು ಯಾವ ಹಣಕಾಸು ವ್ಯವಹಾರ ಮಾಡದಿದ್ದರೂ ‘ವ್ಯವಹಾರಕ್ಕೆ ಉಪಯೋಗಿಸ­ಲಾ­ಗಿದೆ’ ಎಂಬ ಸಂದೇಶ ಕಳವಳಕಾರಿಯಾಗಿದೆ.

ಬ್ಯಾಂಕ್ ಮೂಲಗಳನ್ನು ಸಂಪರ್ಕಿಸಿದಾಗ ಈ ವ್ಯವಹಾರವು ಮುಂಬೈನ ಲೆದರ್ ಕಂಪೆನಿಯೊಂದ­ರಲ್ಲಿ swipe ಮಾಡಿರುವುದೆಂದು ತಿಳಿದುಬಂತು. ಯಾವುದೇ ವ್ಯವಹಾರಕ್ಕೆ ಅವಕಾಶ ಕೊಡದೆ ತಕ್ಷಣ ಕಾರ್ಡ್‌ ಚಲಾವಣೆ ಸ್ಥಗಿತಗೊಳಿಸಿದ ಅಧಿಕಾರಿಗಳ ಮುತುವರ್ಜಿಯನ್ನು ಅಭಿನಂದಿಸಬೇಕು. ಆದರೆ  ಪ್ರಶ್ನೆ ಇರುವುದೇ ಬೇರೆ. ಹೀಗಾದರೆ  ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳು ಎಷ್ಟು ಸುರಕ್ಷಿತ? ಬ್ಯಾಂಕ್‌ಗಳು ಲಭ್ಯವಿರುವ ತಂತ್ರಜ್ಞಾನ ಬಳಸಿಕೊಂಡು ಗ್ರಾಹಕರಿಗೆ ಸುರಕ್ಷತೆ ಒದಗಿಸಬೇಕು. ಮೇಧಾವಿ ಖದೀಮರ ಕಳ್ಳಾಟಕ್ಕೆ ಕಡಿವಾಣ ಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.