ADVERTISEMENT

ಯಡಿಯೂರಪ್ಪ ಅವರು `ಭಸ್ಮಾಸುರಾ'ನಾ?

ಟಿ.ಗೋವಿಂದರಾಜು
Published 14 ಮೇ 2013, 19:59 IST
Last Updated 14 ಮೇ 2013, 19:59 IST

ಅವರು ಮತ್ತೆ ಮತ್ತೆ ಹೇಳಿಕೊಳ್ಳುವ ಮಾತುಗಳು ಅದೇಕೋ ಈ ಅನುಮಾನ ಬರಿಸುತ್ತವೆಯಲ್ಲವೇ? ಬಿಜೆಪಿಯನ್ನು ಸರ್ವನಾಶ ಮಾಡುವುದಾಗಿ ಅವರು ಹೇಳಿದ್ದರಂತೆ. ಅದರಂತೆ ಈ ಚುನಾವಣೆಯಲ್ಲಿ ಆ ಪಕ್ಷ ನೆಲ ಕಚ್ಚಲು ತಾವೇ ಕಾರಣವೆಂದು ಈಗ ವಿಜಯದ ಕೇಕೆ ಹಾಕುತ್ತಿದ್ದಾರೆ.

ಶೋಭಾ ಕರಂದ್ಲಾಜೆ ಸಹ ಇದೇ ಮಾತುಗಳನ್ನು ಮಾಧ್ಯಮಗಳ ಮುಂದೆ ಜೋರಾಗಿಯೇ ಹೇಳಿಕೊಂಡು ಬೀಗುತ್ತಿದ್ದಾರೆ. ಮಾಧ್ಯಮದವರೂ ಇದನ್ನು ಒಪ್ಪಿದಂತೆಯೇ ತಮ್ಮ ಚರ್ಚೆ, ವಿಶ್ಲೇಷಣೆಗಳಲ್ಲಿ ಬಳಸುತ್ತಿದ್ದಾರೆ.

ಇದನ್ನು ಒಪ್ಪಿದರೆ, ತಮ್ಮ ದುರ್ಗತಿಗೆ ತಾವೇ ಕಾರಣ - ಎಂದೂ ಯಡಿಯೂರಪ್ಪ ಪ್ರಚಾರ ಮಾಡಿಕೊಂಡಂತಾಯಿತಲ್ಲವೇ? ಮತ್ತು ಇದೊಂದು ರೀತಿ ವಿಕೃತಾನಂದ ಎಂದಾಗುವುದಿಲ್ಲವೇ?

ಇದು ಒತ್ತೊಟ್ಟಿಗಿರಲಿ. ಬಿಜೆಪಿ ನೆಲ ಕಚ್ಚಲು ತಾವು ಪಕ್ಷ ಬಿಟ್ಟಿದ್ದು ಹಾಗೂ ಹೊಸ ಪಕ್ಷ ಕಟ್ಟಿದ್ದು ಕಾರಣವೆಂದು ಅವರು ಹೇಳುವುದನ್ನು ನಂಬಿದರೆ, ಯಡಿಯೂರಪ್ಪ ಸರ್ವ ಶಕ್ತರೆಂದೂ, ಸೃಷ್ಟಿ , ಸ್ಥಿತಿ, ಲಯಗಳು ತಮ್ಮ ಇಚ್ಛಾನುವರ್ತಿಗಳೆಂದೂ ಅವರು ಉದ್ಘೋಷಿಸಿಕೊಂಡಂತಾಗುತ್ತದೆ. ಇದನ್ನೂ ಒಪ್ಪಿದರೆ ಒಂದು ಮುಖ್ಯ ಪ್ರಶ್ನೆ ಎದುರಾಗುತ್ತದೆ:

ಹಾಗಾದರೆ ಈ ರಾಜಕೀಯ ಪರಿವರ್ತನೆಗಳಲ್ಲಿ ಮತದಾರ ಎಂಬುವವನು ಕೇವಲ ನಾಮ್‌ಕಾವಾಸ್ಥೆಯೆ? ಅವನ ವಿವೇಕ, ಇಚ್ಛಾಶಕ್ತಿ, ತೀರ್ಮಾನ...  ಈ ಯಾವುದಕ್ಕೂ ಅರ್ಥವಾಗಲಿ, ಬೆಲೆಯಾಗಲಿ ಇಲ್ಲವೇ? ಯಾವ ರಾಜಕೀಯ ಪರಿಣತರ ವಿಶ್ಲೇಷಣೆಯನ್ನೂ ಮೀರಿದಂತೆ ಈ ಬಾರಿಯ ಫಲಿತಾಂಶ ನೀಡಿದ ಮತದಾರ ಪ್ರಭುವನ್ನು ನಾವು ನಿರ್ಲಕ್ಷಿಸುವುದು ಸರಿಯೇ? ವಿಧಾನ ಸೌಧದಲ್ಲಿ ಯಾರು ಇರಬೇಕು, ಹೊರಗೆ ಯಾರು ಹೋಗಬೇಕು - ಎಂಬುದನ್ನು ತೀರ್ಮಾನಿಸಿದ ನಿಜವಾದ `ಬಿಗ್ ಬಾಸ್' ಈ ನಾಡಿನ ಮತದಾರನೇ ಹೊರತು ಯಾವ ರಾಜಕೀಯ ಮುಖಂಡನಾಗಲೀ,  ಜ್ಯೋತಿಯಾಗಲೀ ಅಲ್ಲವೇ ಅಲ್ಲ. ಯಡಿಯೂರಪ್ಪ ಅಂತಹ ಯಾವುದೇ ವ್ಯಕ್ತಿ ತಮ್ಮ ಅಪೇಕ್ಷೆಯಂತೆಯೇ ಎಲ್ಲವನ್ನೂ ನಿಯಂತ್ರಿಸುವುದಾಗಿದ್ದರೆ, ಅವರು ಬಿಜೆಪಿಯನ್ನು ಮಾತ್ರ ಸೋಲಿಸಿ, ತಮ್ಮ ಅನುಯಾಯಿಗಳು ಎಲ್ಲರನ್ನೂ ಗೆಲ್ಲಿಸಿಕೊಳ್ಳಬಹುದಾಗಿತ್ತಲ್ಲವೇ?

ಸೋಲಿಗೆ, ಯಡಿಯೂರಪ್ಪ ಪಕ್ಷ ಬಿಟ್ಟದ್ದೇ ಕಾರಣ - ಎಂಬುದೂ ಪೂರ್ಣ ನಿಜವಲ್ಲ. ನೋಟು ಎಣಿಕೆ ಯಂತ್ರವನ್ನೇ ಮನೆಯಲ್ಲಿ ಇಟ್ಟುಕೊಂಡವ  ರನ್ನೂ ಮತ್ತೆ ಗೆಲ್ಲಿಸಿದ್ದರೆ ಮತದಾರನಿಗೇ ಅವಮಾನವಾಗುತ್ತಿರಲಿಲ್ಲವೇ? ಆಯ್ಕೆಯಾಗಲೇಬೇಕಿದ್ದ ಒಬ್ಬಿಬ್ಬರು ಸೋತಿರುವುದು ಆಕಸ್ಮಿಕವೆಂದೇ ಭಾವಿಸೋಣ.

ಆದ್ದರಿಂದ,ಬಿಜೆಪಿಗೆ ಮಣ್ಣು ಮುಕ್ಕಿಸಿ, ಕಾಂಗ್ರೆಸ್ಸಿಗೆ ಅಧಿಕಾರವಿತ್ತದ್ದು ತಾನೇ ಎಂದು ಯಾರಾದರೂ ಹೇಳಿದರೆ ಅದು ಕೇವಲದ ನುಡಿಯಾಗುತ್ತದೆ. ಈ ಎಲ್ಲಾದರ ಮಹತ್ತೂ ಮತದಾರನಿಗೇ ಸಲ್ಲಬೇಕಾಗುತ್ತದೆ. 
ಅಂದಹಾಗೆ, ಆಡಳಿತ ಮಾಡುತ್ತಿದ್ದ ಬಿಜೆಪಿಗೆ ಸರಿಸಮಾನವಾದ ಸ್ಥಾನಗಳನ್ನು ಜನತಾ ದಳಕ್ಕೂ ಕೊಟ್ಟಿರುವುದರಲ್ಲಿ ಮತದಾರನ ಇಂಗಿತ ಏನಿರಬಹುದು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.