ADVERTISEMENT

ರಜಾ ದಿನ: ಹೀಗೇಕೆ?

ಶ್ರೀನಿವಾಸ ಜಿ.ಕಪ್ಪಣ್ಣ
Published 29 ಡಿಸೆಂಬರ್ 2013, 19:30 IST
Last Updated 29 ಡಿಸೆಂಬರ್ 2013, 19:30 IST

ಕವಿ ಜಿ.ಎಸ್. ಶಿವರುದ್ರಪ್ಪನವರ ಅಂತ್ಯಕ್ರಿಯೆ ಸರ್ಕಾರಿ ಮರ್ಯಾದೆಯೂ ಒಳಗೊಂಡ ಶಿಷ್ಟಾಚಾರದೊಂದಿಗೆ ಮುಗಿ­ದಿದೆ. ಅವರು ತೀರಿಕೊಂಡಿದ್ದು ಡಿ. 23ರ ಸೋಮವಾರ. ಅವರ ಅಂತ್ಯಕ್ರಿಯೆ ಗುರುವಾರ ಎನ್ನುವುದೂ ಅಂದೇ ನಿರ್ಧಾರವಾಗಿ ಪ್ರಕಟವೂ ಆಗಿತ್ತು. ಜಿಎಸ್‌ಎಸ್‌ ನಿಧನರಾದ ದಿವಸ ಸರ್ಕಾರ ರಜೆ ಘೋಷಿಸಲಿಲ್ಲ. ಅಂತ್ಯಕ್ರಿಯೆಯ ದಿವಸಕ್ಕೂ ಶಿಷ್ಟಾಚಾರವನ್ನು ನಿಗದಿ ಮಾಡಲಿಲ್ಲ.

ಬದಲಿಗೆ ಅವರು ತೀರಿಕೊಂಡ ಮಾರನೇ ದಿವಸ ಡಿ. 24ಕ್ಕೆ ಸರ್ಕಾರ ರಜೆ ಘೋಷಿಸಿತು. ಜಿಎಸ್‌ಎಸ್‌ ಪಾರ್ಥಿವ ಶರೀರ ದರ್ಶನ ಮಾಡಬಯಸುವವರಿಗೆ ಆ ರಜೆಯಿಂದ ಯಾವ ಪ್ರಯೋ­ಜನವೂ ಆಗಲಿಲ್ಲ. ಸರ್ಕಾರ ತುಸು ಯೋಚನೆ ಮಾಡಿದ್ದರೆ 26 ರಂದು ನಡೆದ ಅಂತ್ಯಕ್ರಿಯೆಯ ದಿವಸಕ್ಕೆ ಆ ರಜೆ ಘೋಷಿ­ಸ­ಬಹು­ದಾಗಿತ್ತು. ಅಂದು ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಇಳಿ ಹೊತ್ತು 2 ಗಂಟೆವರೆಗೂ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.

ಸರ್ಕಾರ ಹೀಗೇಕೆ ಮಾಡಿತೆಂದು ಯೋಚಿಸುವುದು ತಪ್ಪಲ್ಲ.  ಡಿ. 25 ಕ್ರಿಸ್‌ಮಸ್ ಕಾರಣಕ್ಕೆ ಸಾರ್ವತ್ರಿಕ ರಜೆ ಇದ್ದೇ ಇತ್ತು. ಅದರೊಂದಿಗೆ ತಳಕು ಹಾಕಿ ಜಿಎಸ್‌ಎಸ್‌ ನಿಧನ ನೆಪದ ರಜೆಯನ್ನು ಘೋಷಿಸಿರಬಹುದೇ...? ಸರ್ಕಾರಿ ನೌಕರ­ವೃಂದ ರಜೆಗಳನ್ನು ಹಿಂದೆ ಮುಂದೆ ಒಗ್ಗೂಡಿಸಿ ಕೊಂಡು ಊರಿಂದ ಹೊರಕ್ಕೆ ಹೋಗುವ ಪರಿಪಾಠಕ್ಕೆ ಸರ್ಕಾರ ಬೆಂಬಲವಾಗಿ ನಿಂತಿತೇ ಎನ್ನುವುದು ಒಂದು ಸಂದೇಹ.

25ರ ಮರು ದಿವಸ ಅಂತ್ಯಕ್ರಿಯೆ ದಿವಸ. ಅಂದು ರಜೆ ಘೋಷಿಸದೇ ಇರುವುದಕ್ಕೆ ಬಲವಾಗಿ ಎದ್ದು ಕಾಣುವ ಕಾರಣ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಅಂದಿನಿಂದ ಆರಂಭವಾಯಿ­ತೆನ್ನುವುದು. ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ಕಲಾಗ್ರಾಮದಲ್ಲಿ ನಡೆದ ಅಂತ್ಯಕ್ರಿಯೆ ಯಲ್ಲಿ ಪಾಲ್ಗೊಂಡು ನಂತರ ಚಿತ್ರೋತ್ಸವ ಉದ್ಘಾಟನೆಗೆ ತೆರಳಿದರು.

ಒಂದು ವೇಳೆ ಆ ದಿವಸವೇ ರಜೆ ಘೋಷಣೆ ಮಾಡಿದ್ದರೆ...? ಜಿಎಸ್‌ಎಸ್‌ ಅವರದು ಕನ್ನಡ ಸಾಂಸ್ಕೃತಿಕ ಲೋಕದ ಮೇರು ವ್ಯಕ್ತಿತ್ವ.  ಅವರದೇ ಹಲವಾರು ಕವನಗಳು ಚಲನಚಿತ್ರಗಳ ಮೆರುಗನ್ನು ಹೆಚ್ಚಿಸಿದ್ದೂ ಇದೆ. ಆದರೆ ಜಿಎಸ್‌ಎಸ್ ಪಾರ್ಥಿವ ಶರೀರದ ದರ್ಶನ ಪಡೆಯಲು ತಥಾ ಕಥಿತ ಕನ್ನಡದ ಹೀರೋಗಳಲ್ಲಿ ಯಾರೊಬ್ಬರೂ ಬರಲಿಲ್ಲ. ಕೆಲವು ಕಲಾವಿದರು ನಿರ್ಮಾಪಕ, ನಿರ್ದೇಶಕರು ಬಂದಿದ್ದ­ರಾದರೂ ಅವರನ್ನು ಸಿನಿಮಾದವರು ಎನ್ನುವು­ದಕ್ಕಿಂತ ಸಾಹಿತ್ಯಲೋಕ, ರಂಗಭೂಮಿ ನಂಟಿನವರು ಎನ್ನುವುದೇ ಹೆಚ್ಚು ಸೂಕ್ತ.

ಇನ್ನೂ ದೊಡ್ಡ ವಿಪರ್ಯಾಸವೊಂದಿದೆ. ಜಿಎಸ್ಎಸ್‌ ಅಂತ್ಯಕ್ರಿಯೆ ನಡೆದ ಅರ್ಧ ಮುಕ್ಕಾಲು ತಾಸಿನಲ್ಲಿ ಚಿತ್ರೋತ್ಸವ ಅದ್ದೂರಿಯಿಂದ ಉದ್ಘಾಟನೆ­ಯಾಯಿತು. ಕನ್ನಡ ಚಿತ್ರೋದ್ಯಮದವರೇ ಅಲ್ಲದೆ ಅಕ್ಕಪಕ್ಕ ರಾಜ್ಯದ ಕೆಲವು ಗಣ್ಯರೂ ಆಗಮಿಸಿದ್ದು ಅರ್ಥಪೂರ್ಣ­ವಾಗಿತ್ತು. ಆದರೆ ಆ ನೆರಳು ಬೆಳಕಿನ ಸಂಭ್ರಮದಲ್ಲಿ ಯಾರಿಗೂ ಜಿಎಸ್ಎಸ್ ನೆನಪಾಗಲಿಲ್ಲ.  ಒಂದು ನಿಮಿಷ ಮೌನ ಶ್ರದ್ಧಾಂಜಲಿ ಅರ್ಪಿಸಬೇಕೆಂಬ ವಿವೇಕ ಯಾರಲ್ಲೂ ಕೆಲಸ ಮಾಡಲಿಲ್ಲ. ಕನ್ನಡವನ್ನು ಕಟ್ಟುವ, ಸಂಸ್ಕೃತಿಯನ್ನು ಉಜ್ವಲಗೊಳಿಸುವ, ನಾಡಿನ ಸಮಷ್ಟಿ ಪ್ರಜ್ಞೆಯನ್ನು ಸದಾ ಜೀವಂತವಿಡುವ ಕವಿ ಬರಹಗಾರರ ಪಾಡು ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.