‘ರಸ್ತೆ ಸದ್ಬಳಕೆ ಹೇಗೆ?’ ಎಂಬ ಲೇಖನದಲ್ಲಿನ (ಸಂಗತ, ಜೂನ್ 2) ಸಲಹೆಗಳು ಅತ್ಯಂತ ಯೋಗ್ಯವಾಗಿವೆ. ಇಂದು ಬೆಂಗಳೂರಿನ ಯಾವ ಗಲ್ಲಿ, ಚಿಕ್ಕಪುಟ್ಟ ರಸ್ತೆಯನ್ನೂ ಖಾಲಿಯಾಗಿ ನೋಡಲು ಸಾಧ್ಯವಿಲ್ಲ. ಇಕ್ಕೆಲಗಳಲ್ಲೂ ಕಾರುಗಳದೇ ಸಾಮ್ರಾಜ್ಯ. ಬೀದಿಯಲ್ಲಿ ಮಕ್ಕಳು ಮೊದಲಿನಂತೆ ಆಟವಾಡುವುದಿರಲಿ, ನಡೆದಾಡುವಂತೆಯೂ ಇಲ್ಲ!
ಪ್ರತಿ ಮನೆಯಲ್ಲೂ ಅವರವರ ಯೋಗ್ಯತೆಗೆ ತಕ್ಕಂತೆ ಮೂರೋ ನಾಲ್ಕೋ ವಾಹನಗಳು. ಅವುಗಳನ್ನು ನಿಲ್ಲಿಸಲು ತಮ್ಮ ಕಾಂಪೌಂಡಿನಲ್ಲಿ ಜಾಗವಿಲ್ಲದಿದ್ದರೇನಂತೆ? ಪಕ್ಕದ ರಸ್ತೆಯಲ್ಲೋ ಅದರ ಹಿಂದಿನ ರಸ್ತೆಯಲ್ಲೋ ನಿಲ್ಲಿಸಿದರಾಯಿತು. ಮುಖ್ಯ ರಸ್ತೆಗಳಲ್ಲಿ ಕೂಡಾ ಎಷ್ಟೋ ಕಾರುಗಳು ಇಡೀ ದಿನ ವಾರಸುದಾರರಿಲ್ಲದೇ ನಿಂತಿರುತ್ತವೆ. ಬಹುತೇಕರು ಸ್ವಲ್ಪ ದೂರ ನಡೆದು ಹೋಗಬಹುದಾದ ಜಾಗಕ್ಕೆಲ್ಲ ಮಕ್ಕಳನ್ನು ಕಾರಲ್ಲೇ ಕರೆದೊಯ್ಯುತ್ತಾರೆ. ನಂತರ ಮಕ್ಕಳು ಅವರನ್ನೇ ಅನುಸರಿಸುತ್ತಾರೆ.
18 ವರ್ಷ ತುಂಬದ ಮಕ್ಕಳಿಗೂ ದ್ವಿಚಕ್ರವಾಹನ ಕೊಡಿಸುವ ತರಾತುರಿ ಪಾಲಕರಿಗೆ. ಆ ಮಕ್ಕಳು ಪಕ್ಕದ ಬೀದಿಯಲ್ಲಿ ಸಿಗುವ ಬ್ರೆಡ್ ತರಲಿಕ್ಕೋ , ನೋಟ್ ಪುಸ್ತಕ ತರಲಿಕ್ಕೋ ಗಾಡಿಯಲ್ಲಿ ಭರ್ರೆಂದು ಓಡುತ್ತಾರೆ.
ಇನ್ನು ಫುಟ್‌ಪಾತ್‌ಗಳೆಲ್ಲ ದ್ವಿಚಕ್ರವಾಹನ ಸವಾರರದು. ಫುಟ್‌ಪಾತ್ ಮೇಲೆ ಹಾರ್ನ್ ಮಾಡುತ್ತಾ ವೇಗವಾಗಿ ಗಾಡಿ ಓಡಿಸಿಕೊಂಡು ಬರುವುದು ನೋಡಿ ಪಾದಚಾರಿಗಳು ಪಕ್ಕಕ್ಕೆ ಸರಿದು ನಿಲ್ಲಬೇಕು.
ಲಕ್ಷ ಲಕ್ಷ ಡೊನೇಶನ್ ಪೀಕಿಸಿಕೊಳ್ಳುವ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇರುವುದಿಲ್ಲ. ಶಾಲಾ ವಾಹನಗಳೂ ರಸ್ತೆಯಲ್ಲೇ ಇರುತ್ತವೆ. ಶಾಲೆಗಳಿಗೆ ಮಾನ್ಯತೆ ಕೊಡುವಾಗ ಪಾರ್ಕಿಂಗ್‌ಗೆ ಸಾಕಷ್ಟು ಸ್ಥಳಾವಕಾಶ ಇದ್ದರೆ ಮಾತ್ರ ಕೊಡಬೇಕು. ಲಂಚಕೋರ ಅಧಿಕಾರಿಗಳೇ ತುಂಬಿರುವ ನಮ್ಮ ವ್ಯವಸ್ಥೆಯಲ್ಲಿ ಅದನ್ನು ನಿರೀಕ್ಷಿಸುವಂತೆಯೇ ಇಲ್ಲ ಬಿಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.