ಭಾರತದಂತಹ ಬಹುಭಾಷೆಯ, ಬಹು-ಸಂಸ್ಕೃತಿಯ ರಾಷ್ಟ್ರಕ್ಕೆ ಪ್ರಜಾಪ್ರಭುತ್ವವೇ ಸೂಕ್ತ. ಆದರೆ ಇತ್ತೀಚಿನ ಬೆಳವಣಿಗೆಗಳು ರಾಜ್ಯಗಳನ್ನು ನಗಣ್ಯಗೊಳಿಸುವತ್ತ ಸಾಗಿವೆಯೇ ಎಂಬ ಅನುಮಾನ ಮೂಡಿಸುತ್ತಿವೆ. ಬಲಿಷ್ಠ ಕೇಂದ್ರ ಸರ್ಕಾರ ಇರಬೇಕು. ಆದರೆ ಅದರ ಬಲಿಷ್ಠತೆ ರಾಜ್ಯಗಳನ್ನು ದುರ್ಬಲಗೊಳಿಸಬಾರದು. ಅದು ರಕ್ಷಣೆ, ಆರ್ಥಿಕ, ಅಂತರರಾಷ್ಟ್ರೀಯ ವ್ಯವಹಾರ ಮೊದಲಾದ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿರಬೇಕು.
ಇನ್ನುಳಿದಂತೆ ಸಂಸ್ಕೃತಿ, ಭಾಷೆ, ಸಾಹಿತ್ಯ, ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ರಾಜ್ಯಗಳ ಹಕ್ಕನ್ನು ಗೌರವಿಸಲೇಬೇಕು. ಆಗಲೇ ಪ್ರಬಲ ಗಣತಂತ್ರ ರಾಷ್ಟ್ರವಾಗಲು ಸಾಧ್ಯ.
ಭಾಷಾವಾರು ರಾಜ್ಯಗಳ ವಿಂಗಡಣೆ ನಡೆಯುತ್ತಿದ್ದಾಗಲೇ, ಅಂದರೆ ಸುಮಾರು ಅರವತ್ತು ವರ್ಷಗಳ ಹಿಂದೆಯೇ ‘ನಮ್ಮದು ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ ಆಗಬೇಕೆಂಬುದೇ ನನ್ನ ದೃಢವಾದ ಅಭಿಪ್ರಾಯ. ರಾಜ್ಯಗಳು ಸ್ವಾಯತ್ತವಾಗಿರಲಿ; ಸೈನ್ಯ ಮುಂತಾದ ವ್ಯವಸ್ಥೆಗಳು ಕೇಂದ್ರದ ಕೈಯಲ್ಲಿರಲಿ’ ಎಂದು ಕುವೆಂಪು ಅಭಿಪ್ರಾಯಪಟ್ಟಿದ್ದರು. ಅಮೆರಿಕದ ಸ್ಟೇಟ್(State)ಗಳಿಗೆ ಇರುವಂತೆ, ನಮ್ಮಲ್ಲಿಯೂ ರಾಜ್ಯಗಳಿಗೆ ಸ್ವಾತಂತ್ರ್ಯದ ಅಗತ್ಯವಿದೆ.
ರಾಜ್ಯಗಳಿಗೆ ಅಷ್ಟೊಂದು ಆಂತರಿಕ ಸ್ವಾತಂತ್ರವಿದ್ದರೂ ಅಮೆರಿಕ ಒಂದು ಬಲಿಷ್ಠ ರಾಷ್ಟ್ರವಾಗಿ ಉಳಿದಿಲ್ಲವೆ? ಹಾಗೆಯೇ ನಮ್ಮದು ‘ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ’ ಆಗಬೇಕಾದ ಅಗತ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.