ನಾವು ಗೌರವಿಸುವ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ,
ಶಿಕ್ಷಕ ಸಮುದಾಯದ ಸಂಕಷ್ಟಗಳು ಹೇಳಿಕೊಳ್ಳಲಾಗದ ಮತ್ತು ಹೇಳತೀರದ ವಿಷಮ ಸ್ಥಿತಿಯಲ್ಲಿ ನಾವು ನಿಮಗೆ ಈ ಪತ್ರವನ್ನು ಬರೆಯಲೇಬೇಕಾಗಿದೆ. ಮಾನಸಿಕ ಹಿಂಸೆ ಮತ್ತು ಕೆಲವರು ತಂದೊಡ್ಡುತ್ತಿರುವ ಆತಂಕಗಳಲ್ಲಿಯೇ ನಮ್ಮ ವೃತ್ತಿ ಕಳೆಯಬೇಕಿದೆ. ಈಗಾಗಲೇ ಹಲವರು ಕಳೆದಿದ್ದಾರೆ. ನಮ್ಮ ಈ ದುಃಸ್ಥಿತಿಗೆ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕಿಂತ ಮುಖ್ಯವಾಗಿ ಶಿಕ್ಷಕ ಸಮುದಾಯದ ಮೇಲೆ ಲಂಚಕ್ಕಾಗಿ ನಡೆಯುತ್ತಿರುವ ದೌರ್ಜನ್ಯ ತುಂಬ ಕ್ರೂರವಾದದ್ದು ಮತ್ತು ತಾಳಲಾರದ್ದು.
ನೇಮಕಾತಿ ಆದೇಶ ಪಡೆಯುವ ಸಂದರ್ಭದಿಂದ ಹಿಡಿದು ನಿವೃತ್ತಿ ವೇತನ ಪಡೆಯುವವರೆಗೆ ಲಂಚಕ್ಕಾಗಿ ನಡೆಯುತ್ತಿರುವ ದೌರ್ಜನ್ಯದಿಂದ ಎಲ್ಲರೂ ಒಳಗೊಳಗೆ ಕೊರಗಬೇಕಾಗಿದೆ, ಯಾತನೆಯಲ್ಲಿ ನರಳುವಂತಾಗಿದೆ. ಹೀಗೆ ಲಂಚಕ್ಕಾಗಿ ಈ ತೆರನಾದ ಹಿಂಸೆ ಕೊಡುತ್ತಿರುವವರು ಮುಖ್ಯವಾಗಿ ಗುಮಾಸ್ತರು. ಮೂರು ನಾಲ್ಕು ಜನರಿರುವ ಇವರು ತಾಲ್ಲೂಕಿನ ಸಾವಿರ ಶಿಕ್ಷಕರ ಜೀವವನ್ನು ಅಲ್ಲಾಡಿಸುತ್ತಾರೆ, ತೊಳಲಾಡಿಸುತ್ತಾರೆ, ಬದುಕನ್ನೇ ಕಿತ್ತು ತಿನ್ನುತ್ತಾರೆ.
ಬಿಇಒ ಕಚೇರಿ ಎಂದರೆ ಅವ್ಯಕ್ತ ಭಯ ಬಹುತೇಕರನ್ನು ಆವರಿಸುತ್ತದೆ. ಯಾವುದೇ ಕೆಲಸವಿರಲಿ ಇವರ ಮುಂದೆ ಸಾಲುಗಟ್ಟಿ ನಿಲ್ಲಬೇಕು, ಜಾಗವಿದ್ದಲ್ಲಿ ದಿನಗಟ್ಟಲೇ ಕೂರಬೇಕು. ಪ್ರಶ್ನೆ ಇದಲ್ಲ, ‘ನಮಸ್ಕಾರ ಸರ್’ ಎಂದು ಇವರನ್ನು ಮಾತನಾಡಿಸಿದರೆ ಕಣ್ಣೆತ್ತಿಯೂ ನೋಡದ ಇವರ ನಡವಳಿಕೆಗೆ ಏನು ಹೇಳಬೇಕು? ನಾವು ಮಾತಿಗೆ ಅರ್ಹರೇ ಅಲ್ಲ ಎನ್ನುವ ರೀತಿ ಇರುತ್ತದೆ ಇವರ ವರ್ತನೆಗಳು. ದುಡ್ಡು ಕೊಟ್ಟ ಮೇಲೂ ಸಿಡುಕುತ್ತಾರೆ. ನಾವು ಅವರಿಗೆ ಬಹಳ ದೊಡ್ಡ ತೊಂದರೆ ಕೊಡುತ್ತಿರುವಂತೆ ನಡೆದುಕೊಳ್ಳುತ್ತಾರೆ.
ದುರಂತವೆಂದರೆ ಇವರ ಸಿಟ್ಟಿನ ಪರಮಾವಧಿ ನಮ್ಮ ಮೇಲೇಕೆ ಎಂಬುದಕ್ಕೆ ಕಾರಣಗಳೇ ಅರ್ಥವಾಗುವುದಿಲ್ಲ. ಬಿಇಒ ಕಚೇರಿಯ ಒಂದು ಭೇಟಿಯ ಯಾತನೆ ಹಲವು ದಿನಗಳವರೆಗೆ ಮುಗಿಯುವುದೇ ಇಲ್ಲ. ಇವರು ಯಾರ ಹೇಳಿಕೆಗೂ ಬಗ್ಗುವುದಿಲ್ಲ. ಬಿಇಒ ಅಲ್ಲದೆ ಸ್ವತಃ ಡಿಡಿಪಿಐ ಹೇಳಿದರೂ ಇವರು ಕೊಡುವ ಮರ್ಯಾದೆ ಅಷ್ಟಕ್ಕಷ್ಟೆ. ಇವು ನಮ್ಮ ಬಿಡು ಬೀಸು ಹೇಳಿಕೆಗಳಲ್ಲ, ಪ್ರಜ್ಞಾಪೂರ್ವಕ ಅನುಭವದ ವಾಸ್ತವಗಳು. ಹೀಗೆ ಈ ಸಂಕಷ್ಟಗಳ ಪಟ್ಟಿ ದೊಡ್ಡದು.
ಈ ಎಲ್ಲ ಸಮಸ್ಯೆಗಳನ್ನು ಸೌಜನ್ಯದಿಂದ ಪ್ರತಿನಿಧಿಸಬೇಕಾಗಿದ್ದ ಕೆಲವು ಶಿಕ್ಷಕರ ಸಂಘಗಳು ಲಂಚವರ್ತಿಗಳಾಗಿರುವುದು, ನಮ್ಮ ನೋವಿನ ಮತ್ತೊಂದು ಮಗ್ಗುಲು. ಗಳಿಕೆ ರಜೆ ನಗದೀಕರಣಕ್ಕೆ ಸಾಮೂಹಿಕವಾಗಿ ಲಂಚ ವಸೂಲಿ ಮಾಡಿ ಕಚೇರಿಯವರಿಗೆ ತಲುಪಿಸುವ ಹಂತಕ್ಕೆ ನಮ್ಮ ಸಂಘಗಳು ತಲುಪಿವೆಯೆಂದರೆ ನಮ್ಮ ಗೋಳು ಯಾರು ಕೇಳುತ್ತಾರೆ? ಈ ಕಟುವಾಸ್ತವವೇ ಲಂಚ ಕೊಡುವ ಅನಿವಾರ್ಯವನ್ನು ಸಾಮೂಹಿಕವಾಗಿ ಒಪ್ಪಿಕೊಂಡಂತಾಗಿಲ್ಲವೆ?
ಇಲ್ಲಿನ ಭ್ರಷ್ಟತೆಯ ಸ್ವರೂಪ ಮತ್ತು ಕ್ರೂರತೆ ತುಂಬ ಆಳವಾದದ್ದು. ಇದು ಕೇವಲ ಒಂದು ತಾಲ್ಲೂಕಿನ ಶಿಕ್ಷಕರ ಸಮಸ್ಯೆಯಲ್ಲ. ಬೀದರ್‌ನಿಂದ ಬೆಂಗಳೂರಿನವರೆಗೆ, ಕರಾವಳಿಯಿಂದ ಬಳ್ಳಾರಿಯವರೆಗೆ ಈ ಭ್ರಷ್ಟತೆಯ ಕ್ರೌರ್ಯಕ್ಕೆ ಬಲಿಯಾದವರಿದ್ದಾರೆ. ಶಿಕ್ಷಕರೆಂದರೆ ಬಹುತೇಕರು ಅಧಿಕಾರಿ ದರ್ಪದಿಂದಲೇ ನಡೆಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ನಮ್ಮ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವ ಕನಿಷ್ಠ ಪ್ರೀತಿ ತಮಗಿದೆ ಎಂದು ನಾವು ಭಾವಿಸುತ್ತೇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.