ADVERTISEMENT

ವಡ್ಡಾರಾಧನೆ ಹೆಸರು: ಇನ್ನಷ್ಟು ಮಾಹಿತಿ

ಪ್ರೊ.ಶಾಶ್ವತಸ್ವಾಮಿ ಮುಕ್ಕುಂದಿಮಠ, ಸಿಂಧನೂರು
Published 4 ಮಾರ್ಚ್ 2013, 19:59 IST
Last Updated 4 ಮಾರ್ಚ್ 2013, 19:59 IST

ವಡ್ಡಾರಾಧನೆ ಬ್ರಾಜಿಷ್ಣು ಎಂಬ ಕವಿ ರಚಿಸಿದ `ಆರಾಧನಾ ಕರ್ಣಾಟ ಟೀಕಾ' ಕೃತಿಯೆಂದು ಖ್ಯಾತ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿಯವರು ಬೆಂಗಳೂರಿನ ಸಮಾರಂಭವೊಂದರಲ್ಲಿ  ತಿಳಿಸಿದ್ದಾರೆ.

ಇದೇ ವಿಚಾರದಲ್ಲಿ ವಡ್ಡಾರಾಧನಾ ಗ್ರಂಥಕ್ಕೆ `ಆರಾಧನಾ ಕರ್ಣಾಟ ಟೀಕಾ' ಹೆಸರಿನಲ್ಲಿ ಕರೆಯಬಹುದೆಂದು ವಿದ್ವಾಂಸರಾದ ಡಾ. ಡಿ.ಎಲ್.ನರಸಿಂಹಾಚಾರ್ಯರವರು ತಾವು ಸಂಪಾದಿಸಿದ `ವಡ್ಡಾರಾಧನೆ' (1949) ಕೃತಿಯ ಪೀಠಿಕಾ ಭಾಗದಲ್ಲಿ 64 ವರ್ಷಗಳ ಹಿಂದೆಯೇ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಅವರು ತಮ್ಮ ವಡ್ಡಾರಾಧನಾ ಸಂಪಾದಿತ ಗ್ರಂಥವನ್ನು ಅದೇ ಹೆಸರಿನಿಂದ ಮತ್ತೆ ಕರೆದಿರುವುದು ಸಂಶೋಧಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.

ಡಿಎಲ್‌ಎನ್ ರವರು ವಡ್ಡಾರಾಧನೆ ಕೃತಿ ಮತ್ತು ಕವಿಯ ಹೆಸರಿನ ಕುರಿತು ಕನ್ನಡ ಭಾಷೆಯ ಗ್ರಂಥಗಳನ್ನಲ್ಲದೆ, ಲಭ್ಯವಿರುವ ಪ್ರಾಕೃತ ಮತ್ತು ಸಂಸ್ಕೃತ ಭಾಷೆಗಳ ಹಲವು ಗ್ರಂಥಗಳನ್ನು ಅವಲೋಕಿಸಿ, ಆಳವಾದ ಅಧ್ಯಯನ ಮಾಡಿ ರಚಿಸಿದ 45 ಪುಟಗಳ ವಿದ್ವತ್‌ಪೂರ್ಣ ಪೀಠಿಕಾ ಭಾಗದಲ್ಲಿ ಅವರು ಪ್ರಸ್ತಾಪಿಸಿದ ವಿಚಾರಗಳು ಇನ್ನಷ್ಟು ಮಹತ್ವದ ಮಾಹಿತಿಗಳನ್ನು ಒದಗಿಸುತ್ತವೆ.

ವಡ್ಡಾರಾಧನೆ ಕೃತಿಯಲ್ಲಿ ಕವಿ ಮತ್ತು ಕೃತಿಯ ಹೆಸರು ಎಲ್ಲಿಯೂ ಉಲ್ಲೇಖವಾಗದಿರುವುದು ಅವುಗಳನ್ನು ಬಾಹ್ಯದ ಆಧಾರದಿಂದ ಗುರುತಿಸುವಾಗ ಒಂದಕ್ಕಿಂತ ಹೆಚ್ಚು ಹೆಸರುಗಳು ತಿಳಿದುಬರುತ್ತವೆ:

1.`ಉಪಸರ್ಗ ಕೇವಲಿಗಳ ಕಥೆ' (ಕೊಲ್ಲಾಪುರದ ಹಸ್ತಪ್ರತಿಯ ಪಟ್ಟಕೆಯ ಮೇಲೆ ಬರೆದಿರುವ ಲಿಖಿತ ರೂಪ),

2. `ಭಗವತಿ ಆರಾಧನಾ' (ಶಿವಕೋಟಿಯಿಂದ ರಚಿಸಿದ ಪ್ರಾಕೃತ ಭಾಷೆಯ ಕೃತಿಯ ಹೆಸರು) ಮತ್ತು

ADVERTISEMENT

3. `ಆರಾಧನಾ ಶಾಸ್ತ್ರ ಕರ್ಣಾಟ ಟೀಕಾ' (ಪುಣ್ಯಾಸ್ರವ ಕಥಾಕೋಶದ ಹೆಸರಿನ ಸಂಸ್ಕೃತ ಗ್ರಂಥದ ಶ್ರೇಣಿಕನ ಕಥೆಯ ಅಂತ್ಯದಲ್ಲಿ ಉಲ್ಲೇಖಿಸಿದ ಸಂಗತಿ).  ಡಿಎಲ್‌ಎನ್ ಪರಿಶೋಧಿಸಿದ ವಡ್ಡಾರಾಧನೆಯ ಹಸ್ತಪ್ರತಿಗಳ ಕೊನೆಯಲ್ಲಿ ಪ್ರತಿಕಾರನು `ವಡ್ಡಾರಾಧನಾ ಕವಚ', `ವಡ್ಡಾರಾಧನಾ ಕಥಾಕೋಶ' ಎಂದು ಬರೆದಿರುವುದನ್ನು ಗಮನಿಸಿದರೆ ವಡ್ಡಾರಾಧನಾ ಸ್ತೋತ್ರ ಶಾಸ್ತ್ರ ಮತ್ತು ಕಥಾಕೋಶಗಳ ವಿಶೇಷ ಗುಣಗಳನ್ನು ಪಡೆದಿದ್ದರಿಂದ ಡಾ. ಡಿಎಲ್‌ಎನ್ ಹಾಗೂ ಡಾ.ಎಂ.ಎಂ. ಕಲಬುರ್ಗಿಯವರು ವ್ಯಕ್ತಪಡಿಸಿರುವ `ಆರಾಧನಾ ಶಾಸ್ತ್ರ ಕರ್ಣಾಟ ಟೀಕಾ' ಹೆಸರು ವಡ್ಡಾರಾಧನೆಗೆ ಸೂಕ್ತವೆನಿಸುತ್ತದೆ.

ಡಾ. ಕಲಬುರ್ಗಿಯವರು ಹೇಳುವ `ಬ್ರಾಜಿಷ್ಣು ' (ಬ್ರಾಜಿಷ್ಣು ಅಲ್ಲ ಬ್ರಾಜಿಷು) ಗ್ರಂಥಕರ್ತನ ಹೆಸರೆಂಬುದು ಸರಿಯಲ್ಲ. ಡಿಎಲ್‌ಎನ್ ರವರು ಎಲ್ಲಿಯೂ ಪ್ರಸ್ತಾಪಿಸಿಲ್ಲ. ಬ್ರಾಜಿಷು ಪದ ಕೃತಿಯ ವಿಶೇಷ ಗುಣಗಳನ್ನು ವರ್ಣಿಸುವ ಪ್ರತ್ಯಯವಾಗಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.