ಪ್ರತಿಷ್ಠಿತ ಜೆಎನ್‌ಯುವಿನಲ್ಲಿ ಆಗುತ್ತಿರುವ ಘಟನೆಗಳು ಆತಂಕಕಾರಿ ಹಾಗೂ ದುರದೃಷ್ಟಕರ. ದೇಶದ್ರೋಹದ ಕಾರಣಕ್ಕೆ ಗಲ್ಲು ಶಿಕ್ಷೆಗೆ ಗುರಿಯಾದ ಅಫ್ಜಲ್ ಗುರುವಿನ ಮುಗಿದ ಅಧ್ಯಾಯದ ವಿಷಯವನ್ನೆತ್ತಿಕೊಂಡು ದೇಶವನ್ನೇ ವೈಚಾರಿಕವಾಗಿ ಇಬ್ಭಾಗವಾಗಿಸಿ, ಅಶಾಂತಿಯ ವಾತಾವರಣ ನಿರ್ಮಿಸುತ್ತಿರುವುದು ಸರಿಯಲ್ಲ.
ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬಾರದೆಂದೇನೂ ಇಲ್ಲ ನಿಜ. ಆದರೆ ಪಠ್ಯೇತರ ಚಟುವಟಿಕೆಗಳೇ ಪ್ರಮುಖವಾಗಿ, ಮುಖ್ಯ ಉದ್ದೇಶವಾದ ಓದುವಿಕೆ ಬದಿಗೆ ಸರಿಯುತ್ತಿರುವುದು ಎಷ್ಟರಮಟ್ಟಿಗೆ ಸರಿ? ಪಾಲಕರು ಮಕ್ಕಳನ್ನು ವಿದ್ಯೆ ಕಲಿಯಲು ಕಾಲೇಜು ಅಥವಾ ವಿಶ್ವವಿದ್ಯಾಲಯಕ್ಕೆ ಕಳುಹಿಸುವರೋ ಇಲ್ಲವೇ ಗಲಾಟೆ ಮಾಡಲೋ? ಉಳಿದ ವಿದ್ಯಾರ್ಥಿಗಳಿಗೂ ಇದರಿಂದ ತೊಂದರೆಯಾಗದೇ?
ಮೊದಲೇ ನಮ್ಮ ದೇಶದ ವಿಶ್ವವಿದ್ಯಾಲಯಗಳು ಜಗತ್ತಿನ ಉನ್ನತ ಸಂಸ್ಥೆಗಳ ಪಟ್ಟಿಯಲ್ಲಿಲ್ಲ. ಆದರೆ, ಗಲಾಟೆಯ ವಿಷದಲ್ಲಿ ಮಾತ್ರ ಕೆಲವು ವಿಶ್ವವಿದ್ಯಾಲಯಗಳು ಹೆಸರು ಮಾಡುತ್ತಿರುವುದು ಎಲ್ಲರೂ ಗಂಭೀರವಾಗಿ ಯೋಚಿಸಲೇಬೇಕಾದ ವಿಚಾರ. ಇಂಥ ವಿಷಯಗಳಲ್ಲಿ ರಾಜಕೀಯವನ್ನು ಬದಿಗಿರಿಸಿ ಶಾಂತಿ, ಸುವ್ಯವಸ್ಥೆ, ಮೌಲಿಕ ಶಿಕ್ಷಣದತ್ತ ಗಮನ ಹರಿಸುವಂತೆ ಮಾಡಬೇಕಾದುದು ತುರ್ತು ಅಗತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.