ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಪ್ರತಿಷ್ಠಿತ ಅಧ್ಯಕ್ಷ ಹುದ್ದೆಗೆ 41 ವರ್ಷದ ಉತ್ಸಾಹಿ ಅನುರಾಗ್ ಠಾಕೂರ್ ಆಯ್ಕೆಯಾಗಿದ್ದಾರೆ. ಕ್ರಿಕೆಟ್ ಆಟದಲ್ಲಿ ಬೇರೂರಿರುವ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ದಂಧೆಗೆ ಸಂಬಂಧಿಸಿದಂತೆ, ಹಿಂದಿನ ಅಧ್ಯಕ್ಷರಾಗಿದ್ದ ಎಂ. ಶ್ರೀನಿವಾಸನ್ ರಾಜೀನಾಮೆ ನೀಡಿ ಹೊರಬರಬೇಕಾಯಿತು. ಈಗ ಕ್ರಿಕೆಟ್‌ನಲ್ಲಿರುವ ಎಲ್ಲಾ ದೋಷಗಳನ್ನು ಸ್ವಚ್ಛಗೊಳಿಸುವ ಗುರುತರವಾದ ಜವಾಬ್ದಾರಿ ಠಾಕೂರ್ ಮೇಲಿದೆ.
ಕ್ರಿಕೆಟ್ ಶುದ್ಧೀಕರಣಕ್ಕೆ ಸಂಬಂಧಿಸಿದಂತೆ ನ್ಯಾ. ಆರ್.ಎಂ.ಲೋಧಾ ನೇತೃತ್ವದ ಸಮಿತಿ ಕೆಲವು ಶಿಫಾರಸುಗಳನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಿದೆ. ಅಧ್ಯಕ್ಷರು ಎರಡು ಅವಧಿಗೆ, ಸದಸ್ಯರು ಮೂರು ಅವಧಿಗೆ ಮಾತ್ರ ಇರಬೇಕು, ಬೆಟ್ಟಿಂಗ್ ಕಾನೂನುಬದ್ಧವಾಗಿ ನಡೆಯುವಂತಾಗಬೇಕು, ಬಿಸಿಸಿಐ ಸದಸ್ಯರು 70 ವರ್ಷಗಳಿಗಿಂತ ಮೇಲ್ಪಟ್ಟವರಾಗಿರಬಾರದು, ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಪ್ರತ್ಯೇಕವಾಗಿರಬೇಕು, ಪಾರದರ್ಶಕತೆ ತರಲು ಆರ್.ಟಿ.ಐ. ಅಡಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಬೇಕು, ಆಡಳಿತ ಮಂಡಳಿಯಲ್ಲಿ ಪ್ರಾಯೋಜಕತ್ವ ವಹಿಸಿರುವ ಇಬ್ಬರಿಗೆ ಅವಕಾಶವಿರಬೇಕು, ಬಿಸಿಸಿಐ ಚುನಾವಣೆ ನಿರ್ವಹಿಸಲು ನಿವೃತ್ತ ಚುನಾವಣಾ ಆಯುಕ್ತರನ್ನು ನೇಮಿಸಬೇಕು ಎಂಬಂತಹ ಉಪಯುಕ್ತವಾದ ಶಿಫಾರಸುಗಳು ಅದರಲ್ಲಿವೆ.
ಎಲ್ಲ ಶಿಫಾರಸುಗಳನ್ನೂ ಪ್ರಾಮಾಣಿಕವಾಗಿ ಅನುಷ್ಠಾನ ಗೊಳಿಸುವುದು ಕಷ್ಟಕರವಾದರೂ ಅಸಾಧ್ಯವೇನೂ ಅಲ್ಲ. ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಸಿಲುಕಿ ಸಾವಿರಾರು ಜನ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ ಮತ್ತು ನೂರಾರು ಯುವಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕ್ರಿಕೆಟ್ ಕ್ರೀಡೆಯಾಗಿ ಮಾತ್ರ ಉಳಿಯಲಿ. ಜೂಜಾಟದ ಅಡ್ಡೆಯಾಗುವುದು ಬೇಡ.ಈ ನಿಟ್ಟಿನಲ್ಲಿ ಅನುರಾಗ್ ಠಾಕೂರ್ ಕಾರ್ಯಪ್ರವೃತ್ತರಾಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.