‘ಸಮಿತಿಗೆ ಸಾಧ್ಯವೇ?’ (ವಾ.ವಾ., ಆ. 22–ಡಾ. ಮ.ಗು.ಬಿರಾದಾರ) ಪತ್ರಕ್ಕೆ ನನ್ನ ವಿಚಾರ. ಮಹಾಕವಿ ವಾಲ್ಮೀಕಿಯ ಕುಲಗೋತ್ರಗಳನ್ನು ಹುಡುಕಲು ರಾಜ್ಯ ಸರ್ಕಾರ ರಚಿಸಿದ ಸಮಿತಿಯ ಅರ್ಹತೆಗೆ ಸಂದೇಹ ವ್ಯಕ್ತಪಡಿಸಿರುವ ಬಿರಾದಾರ ಅವರ ಗಂಭೀರ ಚಿಂತನೆಗಳು ಜಿಜ್ಞಾಸೆಗೆ ಎಡೆಮಾಡಿವೆ.
ಭಾರತೀಯ ಸಾಹಿತ್ಯ, ಸಂಸ್ಕೃತಿಗೆ ಮೇರುಸದೃಶರಾದ ವಿಶ್ವಕವಿ ವಾಲ್ಮೀಕಿ ಹುಟ್ಟಿನ ಮಾಹಿತಿ ನಮಗೆ ಬೇಕಿತ್ತೇ? ಇತರ ರಾಜ್ಯಗಳಿಗಿಲ್ಲದ ಚಾಪಲ್ಯ ಕರ್ನಾಟಕಕ್ಕೇಕೆ? ಭಾರತದ ಪ್ರಥಮ ಮಹಾಕಾವ್ಯವೆಂಬ ಹೆಗ್ಗಳಿಕೆಯ ‘ರಾಮಾಯಣ ಮಹಾಕಾವ್ಯ’ ಸಂಸ್ಕೃತ ಭಾಷೆಯಲ್ಲಿ ಶ್ರೇಷ್ಠ ಕೃತಿ. ವಾಲ್ಮೀಕಿಯನ್ನು ಅರ್ಥ ಮಾಡಿಕೊಳ್ಳುವವರು ಮೊದಲು ಮೂಲ ರಾಮಾಯಣ ಕಾವ್ಯವನ್ನು ಅಧ್ಯಯನ ಮಾಡಬೇಕು. ಅವರು ಸಂಸ್ಕೃತ ಭಾಷೆಯ ಮೇಲೆ ಪ್ರಭುತ್ವ ಸಾಧಿಸಿರಬೇಕು. ಅಂತಹವರಿಗೆ ಮಾತ್ರ ವಾಲ್ಮೀಕಿ ಹಾಗೂ ರಾಮಾಯಣ ಕಾವ್ಯ ನಿಲುಕಬಹುದು.
ಸಮಿತಿಯ ಸದಸ್ಯರಿಗೆ ಸಂಸ್ಕೃತ ಭಾಷಾ ಪರಿಜ್ಞಾನಇದ್ದಂತಿಲ್ಲ. ಸಂಸ್ಕೃತದ ಮೂಲ ರಾಮಾಯಣ ಕಾವ್ಯವನ್ನು ಓದುವುದಿರಲಿ, ಕಾವ್ಯದ ರಕ್ಷಾಪುಟವನ್ನೂ ನೋಡಿದಂತಿಲ್ಲ. ಏಕೆಂದರೆ, ಇವರು ಸಂಸ್ಕೃತ ಭಾಷೆ ಹಾಗೂ ವೈದಿಕ ಸಾಹಿತ್ಯವನ್ನು ನಿರಂತರ ವಿರೋಧಿಸುವವರು. ವೈಚಾರಿಕತೆಯಿಂದ ಎಲ್ಲವನ್ನೂ ಸಾಧಿಸಲು ಸಾಧ್ಯವೆಂಬ ಛಲದಲ್ಲಿರುವ ಈ ತಥಾಕಥಿತ ಸಮಿತಿಯು ಮಹರ್ಷಿ ವಾಲ್ಮೀಕಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ? ಅವರು ಕೊಡುವ ತೀರ್ಪನ್ನು ವಿಶ್ವದ ವಿದ್ವಜ್ಜನ ಸ್ವೀಕರಿಸುವರೇ? ನಿಸ್ಸಂದೇಹವಾಗಿ ಸಾಧ್ಯವಿಲ್ಲ. ಅಂತೆಯೇ ಅಪಹಾಸ್ಯಕ್ಕೆ ಗುರಿಯಾಗುವ ಮುನ್ನ ಸಮಿತಿಯನ್ನು ವಿಸರ್ಜಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.