ಮತ್ತೊಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹೊಸ್ತಿಲಿನಲ್ಲಿದೆ. ಸಮ್ಮೇಳನದಲ್ಲಿ ಹಲವಾರು ಆಕರ್ಷಣೆಗಳಿದ್ದರೂ, ಸಾಹಿತ್ಯಾಭಿಮಾನಿಗಳ ಬಹುಮುಖ್ಯ ಆಕರ್ಷಣೆ ಎಂದರೆ ಪುಸ್ತಕ ಮಳಿಗೆಗಳು ಎಂಬುದರಲ್ಲಿ ಅನುಮಾನ ಇಲ್ಲ. ಬೆಂಗಳೂರು ನಗರವೊಂದನ್ನು ಬಿಟ್ಟರೆ, ರಾಜ್ಯದ ಯಾವುದೇ ಊರುಗಳಲ್ಲೂ ಎಲ್ಲಾ ಪ್ರಕಾಶನಗಳ ಅಪರೂಪದ ಕನ್ನಡ ಪುಸ್ತಕಗಳು ಸಿಗುವಂತಹ ದೊಡ್ಡ ಅಂಗಡಿಗಳಿಲ್ಲ. ಆದ್ದರಿಂದ ನೂರಾರು ಪುಸ್ತಕ ಪ್ರಕಾಶನ ಸಂಸ್ಥೆಗಳು ಭಾಗವಹಿಸುವ ಸಾಹಿತ್ಯ ಸಮ್ಮೇಳನದಿಂದಾಗಿ, ಆಯಾ ಭಾಗದ ಜನರಿಗೆ ಅಪರೂಪದ ಪುಸ್ತಕಗಳ ಸುಗ್ಗಿ.
ಕಳೆದ ಎಂಟು ವರ್ಷಗಳಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪುಸ್ತಕ ಮಳಿಗೆ ಹಾಕಿದ ಅನುಭವ ನನ್ನದು. ಬೆಂಗಳೂರು ಮತ್ತು ಮಡಿಕೇರಿಗಳಲ್ಲಿ ನಡೆದ ಸಾಹಿತ್ಯ ಸಮ್ಮೇಳನಗಳನ್ನು ಹೊರತು ಪಡಿಸಿದರೆ, ಬೇರೆ ಎಲ್ಲಾ ಊರುಗಳಲ್ಲೂ ನನಗೆ ಕಹಿ ಅನುಭವವೇ ಆಗಿದೆ. ಯಾವುದೇ ಕೌಶಲವಿಲ್ಲದ ಜನರು ಪುಸ್ತಕ ಮಾರಾಟ ಮಳಿಗೆಗಳನ್ನು ನಿರ್ಮಿಸುವದರಿಂದ, ವಿಪರೀತ ದೂಳು, ಬಿಸಿಲು, ಗಲಾಟೆ, ಕತ್ತಲುಗಳಿಂದ ಕಂಗೆಡುವಂತಾಗುತ್ತದೆ. ಸಮ್ಮೇಳನದಲ್ಲಿ ಮಾಡಿದ ವ್ಯಾಪಾರಕ್ಕಿಂತಲೂ ಹತ್ತು ಪಟ್ಟು ಹೆಚ್ಚು ಪುಸ್ತಕಗಳು ದೂಳು ಹಿಡಿದು ನಷ್ಟ ಉಂಟಾಗುತ್ತದೆ. ಈ ದೂಳಿನ ಪುಸ್ತಕಗಳನ್ನು ಸಮ್ಮೇಳನ ಮುಗಿದ ನಂತರ ಮತ್ತೆ ಮಾರಾಟ ಮಾಡಲು ಸಾಧ್ಯವಿಲ್ಲ.
ಆದ್ದರಿಂದ ಈ ಬಾರಿ ಶ್ರವಣಬೆಳಗೊಳದಲ್ಲಿ ಸಮ್ಮೇಳನ ನಡೆಸುವಾಗ ಆ ಪ್ರಶಾಂತ ವಾತಾವರಣದಲ್ಲಿ ಪುಸ್ತಕದ ಮಳಿಗೆಗಳನ್ನು ಸುಸಜ್ಜಿತವಾಗಿ ನಿರ್ಮಿಸುವ ಜವಾಬ್ದಾರಿಯನ್ನು ಸ್ವಾಗತ ಸಮಿತಿಯವರು ವಹಿಸುವರೆಂದು ಆಶಿಸುತ್ತೇನೆ. ಈ ಬಾರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವವರು ಹಿಂದೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಿದ್ಧಲಿಂಗಯ್ಯನವರು. ಆದ್ದರಿಂದ ಅವರಿಗೆ ಖಂಡಿತವಾಗಿಯೂ ಈ ನಿರೀಕ್ಷೆಯ ಮಹತ್ವ ತಿಳಿಯುತ್ತದೆ ಎನ್ನೋಣವೇ?
–ವಸುಧೇಂದ್ರ ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.