ADVERTISEMENT

ಹಿಂದಿಯ ಹೇರಿಕೆ ಸಲ್ಲ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 19:30 IST
Last Updated 23 ಏಪ್ರಿಲ್ 2017, 19:30 IST

ದೇಶದಾದ್ಯಂತ ಎಲ್ಲ ಶಾಲೆಗಳಲ್ಲಿ ಹತ್ತನೇ ತರಗತಿಯವರೆಗೆ ಹಿಂದಿ ಭಾಷೆಯನ್ನು ಕಡ್ಡಾಯ ಮಾಡಬೇಕೆಂಬ ಸಂಸದೀಯ ಸಮಿತಿಯೊಂದರ ಶಿಪಾರಸನ್ನು ತಿರಸ್ಕರಿಸುವಂಥ ಅತ್ಯಂತ ವಿವೇಕದ ನಡೆಯನ್ನು ಮೆರೆದಿರುವ (ಪ್ರ.ವಾ., ಏ. 19) ರಾಷ್ಟ್ರಪತಿಗೆ ಕೋಟಿ ನಮಸ್ಕಾರ.

ಒಂದು ಕಡೆ, ಹಿಂದಿಯನ್ನು ಕಡ್ಡಾಯವಾಗಿ ಹೇರುವ ಪ್ರಶ್ನೆಯೇ ಇಲ್ಲ ಎಂದು ಹೇಳುತ್ತ ಇನ್ನೊಂದು ಕಡೆ ಹಿಂಬಾಗಿಲಿನಿಂದ ಅದನ್ನು ಕಡ್ಡಾಯ ಮಾಡುವಂಥ  ಕುಟಿಲ ನಡೆಯಿಂದ ದೇಶದ ಏಕತೆಯನ್ನು ಖಂಡಿತಾ ಸಾಧಿಸಲಾಗುವುದಿಲ್ಲ ಎಂಬುದನ್ನು ಸಂಸದೀಯ ಸಮಿತಿಯಲ್ಲಿರುವ ಉತ್ತರ ಹಿಂದೂಸ್ತಾನಿಯರು ಮರೆಯುತ್ತಿರುವುದು ಈ ದೇಶದ ದುರಂತವೇ ಸರಿ.

ಇದು, ರಾಷ್ಟ್ರವನ್ನು ಕಟ್ಟುವ ನಡೆಯಂತೂ ಅಲ್ಲ. ಕಡ್ಡಾಯವಿಲ್ಲದಿದ್ದಾಗಲೂ ಇಷ್ಟಪಟ್ಟು ಕಲಿಯುವ ಜನ ಕಲಿತೇ ಕಲಿಯುತ್ತಾರೆ. ಅದನ್ನು ‘ಕಡ್ಡಾಯ’ ಎಂದು ಹೇರಿದರೆ ಅದನ್ನು ವಿರೋಧಿಸುವ ಪ್ರವೃತ್ತಿ ಯಾವಾಗಲೂ ಹೆಚ್ಚಾಗುತ್ತದೆ.

ಇಂಗ್ಲಿಷ್ ಮಾಧ್ಯಮಕ್ಕೆ  ಮತ್ತು ಇಂಗ್ಲಿಷ್‌ ಕಲಿಕೆಗೆ ಜನ ಮುಗಿಬೀಳುತ್ತಿರುವ ಜಾಗತೀಕರಣದ ಈ ದಿನಗಳಲ್ಲಿ  ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯ ಕಲಿಕೆಯನ್ನು ಕಡ್ಡಾಯ ಮಾಡುವುದಕ್ಕೇ ಇನ್ನೂ ಹಿಂದು–ಮುಂದು ನೋಡುತ್ತಿರುವಾಗ, ದಕ್ಷಿಣದ ರಾಜ್ಯಗಳವರು ತಮ್ಮ ತಮ್ಮ ಭಾಷೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವಾಗ ಹಿಂದಿಯನ್ನು ಕಡ್ಡಾಯಗೊಳಿಸುವ ಹುನ್ನಾರ,  ಉರಿಯುವ ಗಾಯಕ್ಕೆ ಉಪ್ಪು ಹಾಕಿದಂತೆ.

ಕೇಂದ್ರ ಸರ್ಕಾರ ನಡೆಸುತ್ತಿರುವ ಶಾಲೆಗಳು, ಸಿ.ಬಿ.ಎಸ್.ಇ. ಪಠ್ಯಕ್ರಮದ ಶಾಲೆಗಳಲ್ಲಿ  ಹಿಂದಿಯನ್ನು ಕಡ್ಡಾಯಗೊಳಿಸುವ ಶಿಫಾರಸಿಗೆ ರಾಷ್ಟ್ರಪತಿ ತಾತ್ವಿಕವಾಗಿ ಒಪ್ಪಿಗೆ ನೀಡಿದ್ದಾರೆ ಎಂದು ವರದಿಯಾಗಿದೆ. ಇದಕ್ಕೂ ಒಪ್ಪಿಗೆ ನೀಡಬಾರದಿತ್ತು. ಅಲ್ಲೂ ಆಯಾ ಪ್ರದೇಶದ ಭಾಷೆಗಳ ಕಡ್ಡಾಯ ಕಲಿಕೆಗೆ ಶಿಫಾರಸು ಮಾಡಬೇಕು.

ಹಿಂದಿಯನ್ನು ಪ್ರೀತಿಯಿಂದ ಇಷ್ಟಪಟ್ಟು ಜನ ಕಲಿಯುತ್ತಲೇ ಇದ್ದಾರೆ.  ಜನ ತಾವಾಗೇ ಇಷ್ಟಪಟ್ಟು, ‘ಹಿಂದಿ ದೇಶದ ಸಂಪರ್ಕ ಭಾಷೆಯಾಗಿ ಎಲ್ಲ ಹಂತಗಳಲ್ಲಿ ಇರಲಿ’ ಎಂದು ಸಮ್ಮತಿ ನೀಡುವವರೆಗೂ ಕಾಯುವಷ್ಟು ವಿವೇಕವನ್ನು ಸರ್ಕಾರ ನಡೆಸುವವರು ತೋರಬೇಕು.
-ಆರ್. ಲಕ್ಷ್ಮೀನಾರಾಯಣ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT