ADVERTISEMENT

ಹೀಗೂ ವ್ಯಯಿಸಬಹುದು

ಸವಿತಾ ನಾಗಭೂಷಣ್
Published 15 ಆಗಸ್ಟ್ 2017, 19:30 IST
Last Updated 15 ಆಗಸ್ಟ್ 2017, 19:30 IST

ಕೆ.ಟಿ.ಗಟ್ಟಿ ಅವರ ‘ಇಂಥವರೂ ದೇಶದಲ್ಲಿ ಇದ್ದಾರೆ’ (ಪ್ರ.ವಾ., ಸಂಗತ, ಆಗಸ್ಟ್‌ 15) ಲೇಖನಕ್ಕೆ ಈ ಪ್ರತಿಕ್ರಿಯೆ:
ಖಾಲಿ ಸೀಸೆ, ಹಳೇ ಪೇಪರ್ ಪಡೆಯಲು ಬರುವಾತ, ಮುಂಜಾನೆ ತಾಜಾ ತರಕಾರಿ ತಂದುಕೊಡುವ ಮಹಿಳೆ, ಹಣ್ಣಿನ ಗಾಡಿ ತಳ್ಳಿಕೊಂಡು ಬರುವ ಮುದುಕ, ಹಸಿ ಕಡಲೆಕಾಯಿ ಗಾಡಿಯ ಅಜ್ಜ, ಹಾಲು ತಂದುಕೊಡುವ ಹುಡುಗ, ಕೊರಿಯರ್ ಬಾಯ್, ಗಿಡ ಕತ್ತರಿಸಿ ನೀಟು ಮಾಡುವ ಮಾಲಿ, ಗಮಗಮ ಬೋಂಡಾ ನೀಡುವ ಅಜ್ಜಿ, ಪಾನೀಪೂರಿ ಹುಡುಗ, ಹೋಟೆಲ್ ಮಾಣಿ, ತಟ್ಟೆ ಕ್ಲೀನ್ ಮಾಡುವ ಹುಡುಗ, ಕಸ ತೆಗೆದುಕೂಂಡು ಹೋಗುವ ಅಜ್ಜಮ್ಮ, ಚರಂಡಿ ಶುಚಿ ಮಾಡುವ ಅಣ್ಣ, ನಲ್ಲಿ ನೀರು ಬಿಡುವ ಭಗೀರಥ, ಮಧ್ಯರಾತ್ರಿ ಸಂಚರಿಸುವ ಗೂರ್ಖಾ, ಸಲೂನಪ್ಪ, ಗಾಡಿ ಚಕ್ರಗಳಿಗೆ ಗಾಳಿ ಹಾಕುವ ಹುಡುಗ, ಬಟ್ಟೆ ಮಡಿ ಮಾಡಿ ಕೊಡುವ ಯಪ್ಪ, ಕರೆದ ಕೂಡಲೇ ಓಡಿಬರುವ ಕಂಪ್ಯೂಟರ್ ಬಾಯ್, ಮನೆಗೆ ಸಾಮಾನು ತಂದುಕೊಡುವ ಹುಡುಗ, ಅಪರೂಪಕ್ಕೆ ನಮ್ಮ ಕಾರು ಚಲಾಯಿಸುವ ಡ್ರೈವರ್, ಮನೆ ಕೆಲಸದ ಸಹಾಯಕಿ, ಆಹಾರಕ್ಕಾಗಿ ಹಾಹಾಕಾರ ಮಾಡುವ ಬೀದಿ ನಾಯಿ-ಬೆಕ್ಕುಗಳು... ಹೀಗೆ ಸಣ್ಣ ಪುಟ್ಟ ಕೆಲಸ ಮಾಡಿಕೊಟ್ಟು ಬದುಕನ್ನು ಕಟ್ಟಿಕೊಳ್ಳಲು ಏಗುತ್ತಿರುವ ಸಾವಿರಾರು ಜೀವಗಳು ನಮ್ಮ ಕಣ್ಣಳತೆಯಲ್ಲಿ ಇವೆ.

ಅವರು ನೀಡುವ ಸೇವೆಗೆ ಚೌಕಾಸಿ ಮಾಡದೆ ಸ್ವಲ್ಪ ಉದಾರವಾಗಿ ಇದ್ದರೂ ಸಾಕು ನಮ್ಮ ಹಣ ಸದ್ಬಳಕೆ ಆಗುತ್ತದೆ. ‘ನಾವು ಒಂದು ಕಾಲದಲ್ಲಿ ಹೇಗಿದ್ದೆವು? ನಾಲ್ಕು ಅಕ್ಷರ ಕಲಿತು ಈ ಮಟ್ಟಕ್ಕೆ ಬಂದಿರುವೆವು. ಅವರೂ ನಮ್ಮ ಜೊತೆಗೆ ಹೆಜ್ಜೆ ಹಾಕಲಿ’ ಎಂದು ಯೋಚಿಸಿದ್ದಾದರೆ ನಾವೂ ಸರಳವಾಗಿ ಬದುಕಿ ಮಿಕ್ಕಿದ್ದನ್ನು ಸಮಾಜಕ್ಕೆ ನೀಡಬಹುದು. ಯಾರೂ ಹೊತ್ತುಕೊಂಡು ಹೋಗುವುದಿಲ್ಲ ಎಂಬ ತಿಳಿವು ಸದಾ ಮನಸ್ಸಿನಲ್ಲಿ ಇದ್ದರೆ ಹಣ ಸರಿಯಾದ ದಾರಿಯಲ್ಲಿ ಗಳಿಸಲು-ವಿನಿಯೋಗಿಸಲು ನೂರು ದಾರಿಗಳಿವೆ.

ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT