ADVERTISEMENT

ಹೈ.ಕ.ಪ್ರದೇಶದಲ್ಲಿ ನೇಮಕಾತಿ ರದ್ದು!

ಟಿ.ಆರ್.ಚಂದ್ರಶೇಖರ
Published 27 ಫೆಬ್ರುವರಿ 2013, 19:59 IST
Last Updated 27 ಫೆಬ್ರುವರಿ 2013, 19:59 IST

ನಮ್ಮ ಸರ್ಕಾರವು ಸಂವಿಧಾನದ 371 ಜೆ ಕಲಂ ಜಾರಿಗೆ ಬರುವವರೆಗೆ ಹೈ.ಕ.ಪ್ರದೇಶದಲ್ಲಿ ಶಿಕ್ಷಕರ ನೇಮಕಾತಿಗಳನ್ನು ಸ್ಥಗಿತಗೊಳಿಸಿರುವುದಾಗಿ ಪ್ರಕಟಿಸಲಾಗಿದೆ

(ಪ್ರ.ವಾ.26.02.2013). ಆರಂಭದಿಂದಲೂ 371ಕ್ಕೆ ಇನ್ನಿಲ್ಲದ ಅಡ್ಡಿಗಳು ಉಂಟಾಗುತ್ತಾ ಬರುತ್ತಿರುವುದು ನಮಗೆಲ್ಲ ತಿಳಿದಿದೆ. ಈಗ 371 ಜೆ ಕಲಂಗೆ ಅನುಮೋದನೆ ದೊರೆತು ಎರಡು ತಿಂಗಳ ಮೇಲಾಯಿತು.

ಆದರೆ ನಮ್ಮ ಸರ್ಕಾರವು ಇದಕ್ಕೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ರೂಪಿಸಿ ಅದನ್ನು ಜಾರಿಗೊಳಿಸುವ ಬಗ್ಗೆ ಏನನ್ನೂ ಮಾಡಿದಂತೆ ಕಾಣಲಿಲ್ಲ. ಈಗ ಸರ್ಕಾರವು ಉದ್ಯೋಗದ ನೇಮಕಾತಿಗಳನ್ನು ಸ್ಥಗಿತಗೊಳಿಸುವ ಕ್ರಮ ತೆಗೆದುಕೊಂಡಿದೆ. ಕೇವಲ ಶಿಕ್ಷಕರ ನೇಮಕಾತಿಗಳನ್ನು ಸ್ಥಗಿತಗೊಳಿಸಲಾಗುತ್ತದೆಯೇ? ಲೋಕಾಯೋಗದ ನೇಮಕಾತಿಗಳನ್ನು ತಡೆ ಹಿಡಿಯಲಾಗುವುದೆ?

ಇಂತಹ ಕ್ರಮಗಳಿಂದ ಹೈ.ಕ.ಪ್ರದೇಶದ ಅಭಿವೃದ್ಧಿಗೆ ಅನುಕೂಲಕ್ಕಿಂತ ಹಾನಿಯೇ ಹೆಚ್ಚಾಗುತ್ತದೆ ಎಂಬುದನ್ನು ನಾವು ಯೋಚಿಸಬೇಕು. ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಕ್ರಮಗಳನ್ನು ಕಾಲವಿಳಂಬವಿಲ್ಲದೆ ತೆಗೆದುಕೊಳ್ಳಬೇಕಾದುದು ಅಗತ್ಯ.

ಈ ಪ್ರದೇಶಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ತೆಗೆದುಕೊಂಡ ಕ್ರಮಗಳು ನಮ್ಮ ಪ್ರದೇಶದ ಅಭಿವೃದ್ಧಿಗೆ ಮುಳುವಾಗುತ್ತಿರುವುದು ದೊಡ್ಡ ದುರಂತ. ನಮ್ಮ ಸರ್ಕಾರವು 371ಕ್ಕೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ಸಿದ್ದಪಡಿಸಲು ಸೂಕ್ತವಾದ ಸಮಿತಿಯನ್ನಾದರೂ ನೇಮಿಸುವ ಬಗ್ಗೆ ಶೀಘ್ರ ಕ್ರಮ ತೆಗೆದುಕೊಳ್ಳುತ್ತದೆಯೆಂದು ಭಾವಿಸೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.