ಜನಸಂಖ್ಯೆ ಹೆಚ್ಚುತ್ತಿದೆ. ನಗರಗಳು, ಮಹಾನಗರಗಳಾಗುತ್ತಿವೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಹುಟ್ಟಿ ಬದುಕುತ್ತಿರುವವರು ವಲಸೆ ಬಂದಿರುವವರ ಜೊತೆ ಬದುಕಲು ದಿನನಿತ್ಯ ಸ್ಪರ್ಧೆ ನಡೆಸಬೇಕಾಗಿದೆ. ಅಂತಿಮ ಸ್ಪರ್ಧೆಯಲ್ಲಿ ಚಿಕ್ಕದೊಂದು ನಿವೇಶನ ಮಾಡಿಕೊಂಡ ಮಧ್ಯಮ ವರ್ಗದ ಜನರು ತಮ್ಮ ಜೀವನ ಸಾರ್ಥಕವಾಯಿತೆಂದು ಭಾವಿಸುತ್ತಾರೆ.
ಆದರೆ ನಮ್ಮ ಸರ್ಕಾರ, ನಮ್ಮ ಅಂಧ ಕಾನೂನು ಮತ್ತು ಕರುಣೆಯಿಲ್ಲದ ಅಧಿಕಾರಿಗಳು ಯಾವ ಕ್ಷಣದಲ್ಲಾದರೂ ಅವರ ಉಸಿರಿಗೆ ಕಂಟಕ ತರಬಹುದೆನ್ನುವುದಕ್ಕೆ ಬೆಂಗಳೂರಿನ ಸಾರಕ್ಕಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಒಂದು ನಿದರ್ಶನ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಒಂದು ಹೇಳಿಕೆ ನೀಡಿದ್ದಾರೆ. ಅದು ಅವರ ಅಸಹಾಯಕತೆಯೋ ಅಥವಾ ಭ್ರಷ್ಟ ನೀತಿಯೋ ಗೊತ್ತಾಗುತ್ತಿಲ್ಲ.
‘ಸಾರಕ್ಕಿ ಕೆರೆ ಒತ್ತುವರಿ ತೆರವು ನೋಡಿದರೆ ನಗಬೇಕೊ ಅಳಬೇಕೊ ಗೊತ್ತಾಗುತ್ತಿಲ್ಲ. ಅಲ್ಲಿನ ಜನರ ಸ್ಥಿತಿ ನಿಜಕ್ಕೂ ಬೇಸರ ಮೂಡಿಸಿದೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಮನೆ ಕಟ್ಟಿಸಿಕೊಂಡ ಕುಟುಂಬಗಳು ಬೀದಿ ಪಾಲಾಗಿವೆ. ಇದರಲ್ಲಿ ಅಧಿಕಾರಿಗಳ ತಪ್ಪೂ ಇದೆ.
ಎಲ್ಲಾ ರೀತಿಯ ಮೂಲ ಸೌಲಭ್ಯಗಳನ್ನು ಅಲ್ಲಿ ಕಲ್ಪಿಸಲಾಗಿತ್ತು. ಆದರೆ ಅದನ್ನು ನ್ಯಾಯಾಲಯದ ಆದೇಶದ ಮೇರೆಗೆ ತೆರವುಗೊಳಿಸಲಾಗುತ್ತಿದೆ. ಹಿಂದೆ ಆಡಳಿತ ನಡೆಸಿದವರು ಮಾಫಿಯಾಗಳ ಜೊತೆ ಕೈ ಜೋಡಿಸಿದ್ದೆ ಇದಕ್ಕೆಲ್ಲಾ ಕಾರಣ’ ಎಂದು ಮುಖ್ಯಕಾರ್ಯದರ್ಶಿಯೇ ಹೇಳಿದ್ದಾರೆ. ಅಂದರೆ ಇದರಲ್ಲಿ ಹಿಂದಿನ ಸರ್ಕಾರ ಮತ್ತು ಅಧಿಕಾರಿಗಳ ಲೋಪಗಳಿವೆ ಎಂದು ಅವರೇ ಒಪ್ಪಿಕೊಂಡಂತಾಯಿತು.
ಈ ಕುರಿತು ಇದೇ ಕಾರ್ಯದರ್ಶಿ ಮತ್ತು ಸರ್ಕಾರ ನ್ಯಾಯಾಲಯಕ್ಕೆ ಮನವರಿಕೆ ಮಾಡಿ ನೂರಾರು ಕುಟುಂಬಗಳು ಬೀದಿ ಪಾಲಾಗುವುದನ್ನು ಏಕೆ ತಪ್ಪಿಸಲಿಕ್ಕಾಗಲಿಲ್ಲ?
ಕಳೆದ 35 ವರ್ಷಗಳಿಂದ ಅದೆಷ್ಟು ಸರ್ಕಾರಗಳು ಮತ್ತು ಅಧಿಕಾರಿಗಳು ಬದಲಾಗಿಲ್ಲ. ರಸ್ತೆಗಳು, ಒಳಚರಂಡಿ, ಸರ್ಕಾರಿ ಶಾಲೆಗಳು, ನೀರು, ವಿದ್ಯುತ್ ಪೂರೈಕೆ ಅಲ್ಲದೆ ರಸ್ತೆಗಳಿಗೆ ಹೆಸರಿಟ್ಟು ಆ ಫಲಕಗಳಲ್ಲಿ ಶಾಸಕರ, ಪಾಲಿಕೆ ಸದಸ್ಯರ ಹೆಸರು ನಮೂದಿಸಲಾಗಿತ್ತು.
ಆದರೆ ಅವರು ಯಾರೂ ಜನರ ನೆರವಿಗೆ ಬರಲಿಲ್ಲ. ಆಸ್ತಿ ತೆರಿಗೆ ವಸೂಲಿ ಮಾಡುತ್ತಿದ್ದ ಬಿ.ಬಿ.ಎಂ.ಪಿ ಕೈಕಟ್ಟಿ ಕುಳಿತಿತು! ಅಮಾಯಕರ ಪಾಲಿಗೆ ಅಸರೆಯಾಗಬೇಕಿದ್ದ ನ್ಯಾಯಾಲಯ ಕೂಡ ತೂಕಡಿಸುತ್ತ ತೀರ್ಪು ನೀಡಿದಂತಿದೆ.
ತಪ್ಪೆಸಗಿರುವುದು ಹಿಂದಿದ್ದ ಸರ್ಕಾರ ಮತ್ತು ಅಧಿಕಾರಿಗಳು. ಆ ಬಗ್ಗೆ ನ್ಯಾಯಾಲಯ ಸರಿಯಾಗಿ ವಿಚಾರಣೆ ಮಾಡಿ, ಅಲ್ಲಿನ ನಿವಾಸಿಗಳಿಗೆ ಬದಲಿ ನಿವೇಶನಗಳನ್ನು ಸರ್ಕಾರದಿಂದಲೇ ಕೊಡಿಸಿ ನಂತರ ಕೆರೆ ಒತ್ತುವರಿಗೆ ಅವಕಾಶ ನೀಡಬೇಕಿತ್ತು.
ಕೆರೆ ಒತ್ತುವರಿ ತೆರವುಗೊಳಿಸಿದ ಜಾಗಕ್ಕೆ ದಿನಕ್ಕೊಂದು ಬಣ್ಣದ ಸೂಟು ಧರಿಸಿ ಬರುವ ಜಿಲ್ಲಾಧಿಕಾರಿಗೆ, ಮುಖವಾಡ ಧರಿಸಿ ಮಾತನಾಡುವ ಕಾರ್ಯದರ್ಶಿಗೆ ಸರ್ಕಾರದಿಂದ ಸಕಲ ಸವಲತ್ತುಗಳೂ ಸಿಗುತ್ತವೆ. ತಮ್ಮದಲ್ಲದ ತಪ್ಪಿಗೆ ಸೂರು ಕಳೆದುಕೊಂಡು ಪರಿತಪಿಸುತ್ತಿರುವ ಅಮಾಯಕರ ಗೋಳು ಅಂಥವರಿಗೆ ಹೇಗೆ ಅರ್ಥವಾಗಬಲ್ಲುದು?
ಜವಾಬ್ದಾರಿ ಸ್ಥಾನಗಳಲ್ಲಿರುವ ಅಧಿಕಾರಿಗಳು ಸರ್ಕಾರದ ಗುಲಾಮರಂತೆ ವರ್ತಿಸುವುದರ ಬದಲು, ವ್ಯವಸ್ಥೆಯ ಭ್ರಷ್ಟತೆಗೆ ಬಲಿಯಾಗಿರುವ ಅಮಾಯಕರ ಪರ ವಕಾಲತ್ತು ವಹಿಸಿ ಅವರಿಗೆ ನ್ಯಾಯ ದೊರಕಿಸಬೇಕು. ಅದುವೇ ನಿಜವಾದ ಜನ (ಜನಾರ್ದನ) ಸೇವೆ.
ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯವು ಸಾಧಕಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಅಮಾಯಕರ ರಕ್ಷಣೆಗೆ ನಿಲ್ಲಬೇಕು. ಒತ್ತುವರಿಗೆ ಕಾರಣರಾದ ಬಲಾಢ್ಯರನ್ನು ಬಲಿಹಾಕಬೇಕು. ಇದು ನ್ಯಾಯಾಲಯದಿಂದ ಮಾತ್ರ ಸಾಧ್ಯವೆಂಬುದು ಜನಸಾಮಾನ್ಯರ ನಂಬಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.