ಪ್ಲೂಟೊ ಕುರಿತ ಲೇಖನ (ಪ್ರ.ವಾ., ಜುಲೈ 16) ಮಾಹಿತಿಯುಕ್ತವಾಗಿದೆ. ಪ್ಲೂಟೊ ಪರಿಚಯದ ಮೂಲಕ ನಮ್ಮ ಸೌರಮಂಡಲದ ಒಟ್ಟಾರೆ ಚಿತ್ರ ಓದುಗರಿಗೆ ದೊರೆಯುತ್ತದೆ. ಸೌರಮಂಡಲದ ತುತ್ತತುದಿಯ ಗಾಢ ಕತ್ತಲಲ್ಲಿ ತಣ್ಣನೆ ಮೈ ಎಳೆದುಕೊಂಡು ನಿಧಾನಕ್ಕೆ ಚಲಿಸುವ ಕಪ್ಪು ಕಾಯ ಅದು.
ಗ್ರೀಕ್ ಪುರಾಣದಲ್ಲಿ ಬರುವ ಯಮಲೋಕದ ಅಧಿದೈವನ ಹೆಸರು ಪ್ಲೂಟೊ. ಈ ಕಾಯಕ್ಕೂ ಅದೇ ಹೆಸರಿತ್ತಿದ್ದು ಅರ್ಥಪೂರ್ಣ ಎನಿಸುತ್ತದೆ. ಈ ವಿವರ ಓದಿದಾಗ, ಪ್ಲೂಟೊ ಗ್ರಹಕ್ಕೆ ನಾವು ‘ಯಮ’ ಎಂಬ ಹೆಸರನ್ನೇ ಸಂವಾದಿಯಾಗಿ ಬಳಸಬಹುದು ಎನಿಸುತ್ತದೆ. ಯಮನೂ ಕಪ್ಪು ಮೈಯವ; ಅವನೂ ಸಾವಿನ ಅಧಿದೈವ; ಅವನಿರುವ ನರಕ ಲೋಕವೂ ಒಂದು ರೀತಿ ಕತ್ತಲಿಂದ ಆವೃತವಾದದ್ದು; ಅವನು ಎದುರಾಗುವುದೂ ಸಾವಿನ ಅಂಚಿನಲ್ಲಿ... ಹೀಗೆ ನಮ್ಮವರ ನಂಬಿಕೆಗಳಲ್ಲಿನ ಸಾಮ್ಯಗಳು ಹಲವು.
ಅಲ್ಲದೆ, ಮಿಕ್ಕೆಲ್ಲ ಗ್ರಹಗಳಿಗೆ ಹೆಸರು ಕೊಟ್ಟವರು, ಅವನ್ನು ದೈವತ್ವಕ್ಕೆ ಏರಿಸಿದ್ದಾರೆ. ಹಾಗೇ, ಯಮನೂ ದೇವತೆ ಎಂದೇ ಭಾವಿಸಿದ್ದರೂ ಯಾವ ಆಕಾಶಕಾಯಕ್ಕೂ ಅವನ ಹೆಸರು ಇಟ್ಟಿಲ್ಲ. ಈ ದೃಷ್ಟಿಯಿಂದಲೂ ನಮ್ಮಲ್ಲಿ ಪ್ಲೂಟೊಗೆ ಯಮ ಎಂದು ಹೆಸರು ನೀಡುವುದು ಬಹಳ ಔಚಿತ್ಯಪೂರ್ಣ ಎಂಬುದು ನನ್ನ ಭಾವನೆ. ವಿಜ್ಞಾನಿಗಳು ಇದನ್ನು ಪರಿಗಣಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.