ADVERTISEMENT

ಕಡಿವಾಣ ಅಗತ್ಯ!

ಕಿಕ್ಕೇರಿ ಎಂ.ಚಂದ್ರಶೇಖರ ಬೆಂಗಳೂರು
Published 14 ಜನವರಿ 2018, 19:30 IST
Last Updated 14 ಜನವರಿ 2018, 19:30 IST

ಹಿಂದುತ್ವದ ಬಗ್ಗೆ ನಮ್ಮ ಟಿ.ವಿ. ವಾಹಿನಿಗಳಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ನೋಡಿದರೆ, ವಿದೇಶಿಯರು ನಿಜಕ್ಕೂ ಸೋಜಿಗಗೊಳ್ಳುತ್ತಾರೆ. ಹಿಂದುತ್ವದ ಪರ ಮತ್ತು ವಿರೋಧ ಎರಡರಲ್ಲೂ ಭಾಗಿಯಾಗುವವರು ಹಿಂದೂಗಳೇ ಆಗಿದ್ದಾರೆ.

ರಾಜಕೀಯದಿಂದ ಎದ್ದ ಈ ಹೊಗೆ, ಸಾಹಿತ್ಯ ಹಾಗೂ ಚಿಂತಕರ ವರ್ಗಗಳಲ್ಲಿ ಬೆಂಕಿಯಾಗಿ ಭುಗಿಲೆದ್ದಿದೆ. ಸಂಘ ಪರಿವಾರದವರು, ಸಾಹಿತಿಗಳು ಹಾಗೂ ಚಿಂತಕರು ಕೆಲವೊಮ್ಮೆ ವಿರೋಧ ಪಕ್ಷ ಅಥವಾ ಆಡಳಿತ ಪಕ್ಷಗಳ ಕೈಗೊಂಬೆಗಳಾಗಿ ವರ್ತಿಸುತ್ತಿರುವುದು ಕಂಡುಬರುತ್ತಿದೆ. ಇದು ಭಾರತದ ದುರದೃಷ್ಟಕರ ಬೆಳವಣಿಗೆ.

ದಿನಪತ್ರಿಕೆಗಳಿಗೆ ಇರುವ ಮಡಿವಂತಿಕೆ, ಜವಾಬ್ದಾರಿ ಹಾಗೂ ಒಂದು ಚೌಕಟ್ಟು ಟಿ.ವಿ. ವಾಹಿನಿಗಳಲ್ಲಿ ಇಲ್ಲದಿರುವುದು ದುರಂತ. ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕೊಲೆಗಳಿಗೆ ವೈಯಕ್ತಿಕ ಕಾರಣಗಳಿದ್ದರೂ ವಾಹಿನಿಗಳು ಅದನ್ನು ರಾಜಕೀಯ ಮತ್ತು ಧರ್ಮಗಳಿಗೆ ತಳಕುಹಾಕಿ ತಮ್ಮ ಮುಖ್ಯ ಆಹಾರವಾಗಿಸಿಕೊಂಡಿವೆ.

ADVERTISEMENT

ಇದರಿಂದ ರಾಜಕೀಯ ಪಕ್ಷಗಳು ಮತ್ತು ವಿವಿಧ ಧರ್ಮಗಳ ನಡುವೆ ವೈರತ್ವ ಹೆಚ್ಚುವುದೇ ಹೊರತು ಸಮನ್ವಯ ಮತ್ತು ಹೊಂದಾಣಿಕೆಗಳಾಗಲು ಸಾಧ್ಯವಿಲ್ಲ.

ಟಿ.ವಿ. ವಾಹಿನಿಗಳು ಇಂದು ಸ್ಪರ್ಧೆಗಿಳಿದಿವೆ. ಏನಾದರೂ ಸರಿ– ಹೇಗಾದರೂ ಸರಿ, ನಾವು ಮೊದಲು ಪ್ರಸಾರ ಮಾಡಬೇಕು ಎಂಬ ಪೈಪೋಟಿ. ಅವಸರದಿಂದ ಆಗುವ ಅನಾಹುತಗಳ ಬಗ್ಗೆ ಅವುಗಳಿಗೆ ಕಾಳಜಿ ಇಲ್ಲ. ನ್ಯಾಯಬದ್ಧವಾಗಿ ಮಾತನಾಡಲು ಬಾರದವರನ್ನು ಸ್ಟುಡಿಯೊಗೆ ಆಹ್ವಾನಿಸಿ, ಚರ್ಚೆ ನಡೆಸುವುದರಿಂದ ಯುವ ಸಮುದಾಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಇವುಗಳಿಗೆ ಅರಿವು ಇದ್ದಂತಿಲ್ಲ.

ದುರಂತವೆಂದರೆ, ನ್ಯಾಯಾಲಯಗಳಲ್ಲಿ ನಿರ್ಣಯವಾಗಬೇಕಾದ ವಿಷಯಗಳು ಈಗ ಟಿ.ವಿ. ವಾಹಿನಿಗಳಲ್ಲಿ ಚರ್ಚೆಯಾಗುತ್ತಿವೆ. ಇದರಿಂದಾಗುವ ಸಮಸ್ಯೆಗಳ ಬಗ್ಗೆಯೂ ವಾಹಿನಿಗಳಿಗೆ ಅರಿವಿಲ್ಲ. ಸಮಾಜದ ಸ್ವಾಸ್ಥ್ಯ ಕದಡುವತ್ತ ಹೆಜ್ಜೆ ಹಾಕುತ್ತಿರುವ ವಾಹಿನಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.