ಇತ್ತೀಚೆಗೆ ದುಗ್ಗಲಡ್ಕದ (ದಕ್ಷಿಣ ಕನ್ನಡ ಜಿಲ್ಲೆ) ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸುಳ್ಯ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ‘ಸರ್ಕಾರಿ ಶಾಲೆಗಳು ಮಕ್ಕಳಿಗೆ ಕಳಿಸಲು ಯೋಗ್ಯವಾಗಿಲ್ಲ. ಆದ್ದರಿಂದ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಿ ಎಂದು ಪರಿಷತ್ತಿನ ವೇದಿಕೆಯಲ್ಲಿ ಹೇಳಬಾರದು’ ಎಂದು ಕಿವಿಮಾತು ಹೇಳಿದರು.
ಸಾಹಿತಿಗಳಿಗೆ ನೈತಿಕ ಸ್ಥೈರ್ಯವಿರುವುದಿಲ್ಲ. ಆದ್ದರಿಂದ ಯಾರೂ ಆಕ್ಷೇಪಿಸಲಾರರು ಎಂದುಕೊಂಡು ಅವರು ಹೀಗೆ ಮಾತನಾಡಿರಬಹುದು. ಆ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ನಾನು, ‘ನನ್ನ ಮಗಳು, ನನ್ನೆದುರಿಗಿದ್ದ ಸುಬ್ರಾಯ ಚೊಕ್ಕಾಡಿಯವರ ಮೊಮ್ಮಕ್ಕಳು ಸರ್ಕಾರಿ ಶಾಲೆಯಲ್ಲೇ ಓದುತ್ತಿದ್ದು, ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಬೇಕೆಂದು ಹೇಳಲು ಪರಿಷತ್ತಿನ ವೇದಿಕೆಗಿಂತ ಪ್ರಶಸ್ತವಾದ ಇನ್ನೊಂದು ವೇದಿಕೆ ಇಲ್ಲ’ ಎಂದಿದ್ದೇನೆ.
ಕಲಿಕೆಯನ್ನು ಇಂದಿಗೂ ಬಹುಮುಖಿಯಾಗಿಸಿರುವುದು, ಅತೀ ಕಡಿಮೆ ಅಂಕಗಳ ಮಕ್ಕಳನ್ನೇ ಇರಿಸಿಕೊಂಡು ಕಲಿಸುತ್ತಿರುವುದು ಸರ್ಕಾರಿ ಶಾಲೆಗಳಲ್ಲಿ. ಸರ್ಕಾರಿ ಶಾಲೆಗಳಲ್ಲಿ ಇರುವ ಸಮಸ್ಯೆಗಳನ್ನು ಪರಿಹಾರ ಮಾಡಲು ನೆರವಾಗಬೇಕಾದುದು ಸರ್ಕಾರದ ಅನುದಾನ ಪಡೆಯುವ ಸಂಸ್ಥೆಯಾದ ಸಾಹಿತ್ಯ ಪರಿಷತ್ತಿನ ಜವಾಬ್ದಾರಿಯೂ ಹೌದು. ಆದರೆ, ಸರ್ಕಾರಿ ಶಾಲೆಗಳು ಕಳಪೆ ಎಂದು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರು ಘೋಷಿಸಿ, ಮಕ್ಕಳ ಆತ್ಮವಿಶ್ವಾಸ ಕುಗ್ಗಿಸುವುದನ್ನು ನೋಡಿದರೆ ಅಧ್ಯಕ್ಷರು ಕಾನ್ವೆಂಟ್‌ಗಳ ಏಜೆನ್ಸಿ ತೆಗೆದುಕೊಂಡಿದ್ದಾರೆಯೇ ಎಂಬ ಅನುಮಾನ ಮೂಡುತ್ತದೆ. ಈ ಪ್ರಕರಣದ ನಂತರ, ಕ.ಸಾ.ಪ. ಬೇರೆ ಬೇರೆ ಜಿಲ್ಲಾ ಘಟಕಗಳ ಅಧ್ಯಕ್ಷರೂ ಇದೇ ರೀತಿ ಮಾತನಾಡುತ್ತಿರುವುದು ತಿಳಿದುಬಂತು. ಇದನ್ನು ನೋಡಿಯೂ ಸರ್ಕಾರಿ ಶಾಲೆಗಳ ಶಿಕ್ಷಕರೇಕೆ ಸುಮ್ಮನಿದ್ದಾರೆ? ವಿದ್ಯಾರ್ಥಿಗಳನ್ನು ಸಮರ್ಥಿಸಿಕೊಳ್ಳದಿದ್ದರೆ ನಾಳೆ ವಿದ್ಯಾರ್ಥಿಗಳು ತಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ಕೊಡುವುದಿಲ್ಲ
ವೆಂಬ ಅರಿವಿಲ್ಲವೇ? ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿರುವ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಇದರ ಬಗ್ಗೆ ಏನಾದರೂ ಹೇಳಬಲ್ಲರೇ?
-ಅರವಿಂದ ಚೊಕ್ಕಾಡಿ, ಮೂಡುಬಿದಿರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.