ADVERTISEMENT

ಮನ ಮಿಡಿದ ಪ್ರಸಂಗ

ಜಿ.ಕೆ.ಗೋವಿಂದ ರಾವ್‌
Published 19 ಫೆಬ್ರುವರಿ 2018, 19:30 IST
Last Updated 19 ಫೆಬ್ರುವರಿ 2018, 19:30 IST

‘ಕಲರ್ಸ್’ ಕನ್ನಡ ವಾಹಿನಿಯಲ್ಲಿ ಬಿತ್ತರಗೊಳ್ಳುವ ’ಫ್ಯಾಮಿಲಿ ಪವರ್’ ಎಂಬ ವಾರಾಂತ್ಯದ ಕಾರ್ಯಕ್ರಮವೊಂದನ್ನು ನಾನು ತಪ್ಪದೆ ನೋಡುತ್ತೇನೆ. ಇದನ್ನು ನಡೆಸಿಕೊಡುವವರು ನಾಯಕನಟ ಪುನೀತ್ ರಾಜ್‌ಕುಮಾರ್. ಅನನ್ಯ ರೀತಿಯ ಕಾರ್ಯಕ್ರಮ ಇದು. ಎರಡು ಮನೆತನಗಳು– ತಾಯಿ, ಮಗ, ಸೊಸೆ ಮತ್ತು ಮತ್ತೊಬ್ಬ ಹತ್ತಿರದ ಬಂಧು ಮತ್ತು ಚಿಕ್ಕ ಹುಡುಗ ಅಥವಾ ಹುಡುಗಿ, ತಲಾ ಐದೈದು ಜನ- ಭಾಗವಹಿಸುವ ಕಾರ್ಯಕ್ರಮ.

ಕಾರ್ಯಕ್ರಮದ ಬಹುಮುಖ್ಯ ಆಕರ್ಷಣೆ ಪುನೀತ್ ಅವರೇ. ಅವರ ಅತ್ಯಂತ ಸಹಜ ರೀತಿಯ ಮಾತುಕತೆ, ಭಾಗವಹಿಸುವವರ ಜೊತೆ ಅವರ ನಡವಳಿಕೆ ಇಡೀ ಕಾರ್ಯಕ್ರಮವನ್ನು ತೀರಾ ಆಪ್ತಗೊಳಿಸುತ್ತದೆ.

ಈ ಪುಟ್ಟ ನೋಟ್ ಬರೆಯುತ್ತಿರುವುದು ಅವರನ್ನು ಅಭಿನಂದಿಸುವುದಕ್ಕಷ್ಟೇ ಅಲ್ಲ. ಫೆ. 18ರ ಕಾರ್ಯಕ್ರಮ ನನ್ನ ದೃಷ್ಟಿಯಲ್ಲಿ ಅತ್ಯಂತ ಮುಖ್ಯವಾದುದು, ವಿಶಿಷ್ಟವಾದುದು– ಅನೇಕ ಕಾರಣಗಳಿಗಾಗಿ. ಕಾರ್ಯಕ್ರಮದ ಕೊನೆಯಲ್ಲ್ಲಿ ಲಕ್ಷ ಪ್ರಶ್ನೆ ಎಂಬ ಭಾಗ ಇರುತ್ತದೆ. ಅದರಲ್ಲಿ ಭಾಗವಹಿಸುವುದಕ್ಕೆ ಈ ಎರಡು ಮನೆತನಗಳಲ್ಲಿ ಒಬ್ಬರು ಅರ್ಹತೆ ಪಡೆಯುತ್ತಾರೆ. ಹತ್ತು ಲಕ್ಷದವರೆವಿಗೂ ಗೆಲ್ಲುವ ಅವಕಾಶ ಇರುತ್ತದೆ.

ADVERTISEMENT

ಈ ಸಂಚಿಕೆಯಲ್ಲಿ ಈ ಭಾಗಕ್ಕೆ ಅರ್ಹತೆ ಪಡೆದವರು ಶಾಹೀನಾ ಮನೆಯವರು. ಅರ್ಹತೆ ಗಳಿಸದೇ ಹೋದವರು ಲೋಕಮ್ಮ ಮನೆಯವರು. ಆದರೆ ಅಂದಿನ ಅದ್ಭುತವೆಂದರೆ ಪುನೀತ್ ಅವರು ಶಾಹೀನಾ ಅವರನ್ನು ‘ಈ ಹತ್ತು ಲಕ್ಷ ಗೆದ್ದರೆ ಹೇಗೆ ಬಳಸಲು ಯೋಚಿಸಿದ್ದೀರಿ’ ಎಂದು ಕೇಳಿದ ಪ್ರಶ್ನೆಗೆ ತಾಯಿ– ಮಗ ಇಬ್ಬರೂ ಜೊತೆಯಾಗಿ ಕ್ಷಣವೂ ಚಿಂತಿಸದೆ ‘ನಾವು ಗೆಲ್ಲುವ ಅಷ್ಟೂ ಹಣವನ್ನು ನಮ್ಮ ಎದುರು ಭಾಗವಹಿಸಿರುವ ಮಹಿಳೆಯ ಸುಮಾರು ಹತ್ತು ವರ್ಷದ ಹುಡುಗಿಯ ಹುಟ್ಟು ಕುರುಡನ್ನು ಗುಣಪಡಿಸುವ ಚಿಕಿತ್ಸೆಗಾಗಿ ನೀಡಿಬಿಡುತ್ತೇವೆ’ ಎಂದು ಹೇಳಿದರು. ಮೂರು ಲಕ್ಷದಷ್ಟು ಮೊತ್ತವನ್ನು ಗೆದ್ದರು. ಅದನ್ನು ಅಲ್ಲಿಯೇ ಮಗುವಿನ ತಾಯಿಗೆ ಕೊಟ್ಟುಬಿಟ್ಟರು. ಒಂದಲ್ಲ, ಎರಡಲ್ಲ... ಮೂರು ಲಕ್ಷ ರೂಪಾಯಿಗಳು.

ನಿಜಕ್ಕೂ ಹೃದಯಕ್ಕೆ ತಟ್ಟುವಂತಹ ಸಂದರ್ಭ ಇದು. ಇದನ್ನು ನೋಡುತ್ತಿದ್ದ ಯಾರಿಗೇ ಆಗಲಿ ಕಣ್ಣುಗಳು ತೇವಗೊಂಡಿರಲೇಬೇಕು. ಇಲ್ಲಿ ಕಂಡದ್ದು ಹಿಂದೂ– ಮುಸ್ಲಿಮರಲ್ಲ, ಮನಮುಟ್ಟುವ ಮಾನವೀಯತೆ. ಮಧ್ಯಮ ವರ್ಗದ ಹತ್ತಿರಕ್ಕೂ ಮುಟ್ಟಿರಲಿಕ್ಕಿಲ್ಲದ ಎರಡು ಮನೆತನಗಳು, ಎರಡು ವಿಭಿನ್ನ ಧರ್ಮಗಳ ಅನುಯಾಯಿಗಳು, ಎಂದೂ ಪರಿಚಯವೇ ಇರದಿದ್ದ ಎರಡು ಸಂಸಾರಗಳು. ಆದರೆ ಮಿಡಿದಿದ್ದು ಅವರ ಹೃದಯಗಳು.

ಸದ್ಯದ ನಮ್ಮ ದೇಶದ ಸಂದರ್ಭದಲ್ಲಿ ಇಂತಹ ಪ್ರಸಂಗಗಳಿಗೆ ನಾವು ಎಷ್ಟು ಪ್ರಚಾರ ಕೊಟ್ಟರೂ ಸಾಲದು; ನಾವು ಎದೆಯುಬ್ಬಿಸಿ ಹೇಳಿಕೊಂಡರೂ ಕಡಿಮೆಯೇ.

ಪುನೀತ್ ಅವರು ಆ ಮಗುವನ್ನು ವೇದಿಕೆಯ ಮೇಲೆ ಕರೆಸಿದರು, ಹಾಡಿಸಿದರು, ಎತ್ತಿ ಮುದ್ದಾಡಿದರು ಮತ್ತು ಶಾಹೀನಾ ಮನೆಯವರಿಗೆಲ್ಲ ಕೃತಜ್ಞತೆ ಅರ್ಪಿಸಿದರು. ಇದರಲ್ಲಿ  ನಮ್ಮ ಒಟ್ಟು ಸಮಾಜದ ಭವಿಷ್ಯದ ಕುರಿತಾದ ಭರವಸೆ ಇದೆ, ಇವುಗಳಲ್ಲಿ ನಮ್ಮೆಲ್ಲರದೂ ಭಾಗವಿದೆ ಎಂದು ನಿಸ್ಸಂಶಯವಾಗಿ ಹೇಳಬಯಸುತ್ತೇನೆ.

- ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.