ADVERTISEMENT

ಮೌನದೊಳಗಿನ ಮಾತು

ಪ್ರೊ.ಬರಗೂರು ರಾಮಚಂದ್ರಪ್ಪ
Published 26 ನವೆಂಬರ್ 2018, 20:00 IST
Last Updated 26 ನವೆಂಬರ್ 2018, 20:00 IST

ನವೆಂಬರ್ ತಿಂಗಳು ಸಾವಿನ ತಿಂಗಳಾಗಿ ಪರಿಣಮಿಸಿದೆ. ಅನಂತಕುಮಾರ್, ಅಂಬರೀಷ್‌, ಜಾಫರ್ ಷರೀಫ್ ಮತ್ತು ಕನಗನಮರಡಿ ಬಸ್ ದುರಂತದ ಮೂವತ್ತು ಮಂದಿಯ ಸಾವುಗಳು ಆಘಾತವನ್ನುಂಟು ಮಾಡಿವೆ. ಸಾವುಗಳನ್ನು ಕಂಡ ಕಣ್ಣೀರಿನ, ಆಕ್ರಂದನಗಳ ನಡುವೆ ಹೆಪ್ಪುಗಟ್ಟುವ ಮೌನವನ್ನು ನಾವು ಮರೆಯಬಾರದು. ಬದುಕಿದ್ದಾಗಲೇ ಅಂಬರೀಷ್‌ ಮತ್ತು ಷರೀಫರು ತೋರಿದ ಮೌನದೊಳಗಿನ ಮಾತುಗಳ ಅನುಭವವೂ ನನಗಾಗಿದೆ.

ಒಮ್ಮೆ ಒಂದು ಸ್ಟುಡಿಯೊದಲ್ಲಿ ನಾನು ಚಿತ್ರೀಕರಣ ಮಾಡುತ್ತಿದ್ದೆ. ಅದೇ ಸ್ಟುಡಿಯೊದ ಇನ್ನೊಂದು ಭಾಗದಲ್ಲಿ ಅಂಬರೀಷ್‌ ಚಿತ್ರೀಕರಣದಲ್ಲಿ ಭಾಗವಹಿಸಿದ್ದು ನನಗೆ ತಿಳಿದಿರಲಿಲ್ಲ. ಇದ್ದಕ್ಕಿದ್ದಂತೆ ಅಂಬರೀಷ್‌, ನಾನು ಚಿತ್ರೀಕರಣ ಮಾಡುತ್ತಿದ್ದ ಸ್ಥಳಕ್ಕೆ ಬಂದರು. ನನಗೆ ಆಶ್ಚರ್ಯ ಮತ್ತು ಆನಂದ. ಅವರು ಚಿತ್ರೀಕರಣ ಮುಗಿಸಿ ಸ್ಟುಡಿಯೊದಿಂದ ಹೊರ ಹೋದ ಮೇಲೆ ನನ್ನ ಚಿತ್ರೀಕರಣದ ವಿಷಯ ಗೊತ್ತಾಯಿತಂತೆ. ಕೂಡಲೇ ಕಾರನ್ನು ವಾಪಸ್ ತಿರುಗಿಸಲು ಹೇಳಿ ನನ್ನ ಬಳಿಗೆ ಬಂದಿದ್ದಾರೆ. ನಾನು ಕೃತಜ್ಞತೆ ಸೂಚಿಸಿದಾಗ ಭದ್ರವಾಗಿ ನನ್ನ ಕೈಹಿಡಿದು ಅದುಮಿ ದಿಟ್ಟಿಸಿದರು. ಅವರ ಮೌನದಲ್ಲಿ ನೂರಾರು ಆತ್ಮೀಯ ಮಾತುಗಳಿದ್ದವು.

ಅಂಬರೀಷ್‌ ವಿಶೇಷ ಇರುವುದೇ ಅವರ ಮಾತುಗಳ ನಡುವಿನ ಮೌನದಲ್ಲಿ ಎಂದು ನನ್ನ ಗ್ರಹಿಕೆ. ಗದರಿ ಮೌನವಾಗಿ ನೋಡುತ್ತಾರೆ. ಬೆನ್ನಿಗೆ ಮೃದುವಾಗಿ ಬಾರಿಸಿ ಮೌನ ನೋಟ ಬೀರುತ್ತಾರೆ. ಕೈ ಹಿಡಿದು ಅದುಮಿ ಮೌನ ಚಿಮ್ಮುತ್ತಾರೆ. ಬೈದು ದಿಟ್ಟಿಸುವ ಮೌನವಾಗುತ್ತಾರೆ. ಅಂಬರೀಷ್‌ ಅವರ ಅಂತಃಕರಣವನ್ನು ಈ ಮೌನ ಅನಾವರಣಗೊಳಿಸುತ್ತದೆ. ಈ ಮೌನದೊಳಗಿನ ಮಾತನ್ನು ಅರ್ಥ ಮಾಡಿಕೊಳ್ಳದಿದ್ದರೆ ಅಂಬರೀಷ್‌ ಅರ್ಥವಾಗುವುದಿಲ್ಲ.

ADVERTISEMENT

ಜಾಫರ್ ಷರೀಫರೂ ಅಷ್ಟೇ. ಕೆಲವೊಮ್ಮೆ ತಮ್ಮ ಪಕ್ಷದ ಅಧಿಕಾರಸ್ಥರಿಗೇ ಮಗ್ಗುಲು ಮುಳ್ಳಾಗುವಂತೆ ಮಾತನಾಡುತ್ತಿದ್ದ ಅವರು ಮೌನಕ್ಕೆ ಸರಿದರೆಂದರೆ ಅಲ್ಲಿ ಹತ್ತಾರು ದನಿಗಳು ಅಡಗಿದ್ದವೆಂದೇ ಅರ್ಥ. ಆದರೆ ಅವರು ಮಗ್ಗುಲು ಮುಳ್ಳಿನ ಮಾತುಗಾರರೆಂದು ಹೇಳಿದರೆ ಅದು ಅಪೂರ್ಣ ಹಾಗೂ ಅರೆಸತ್ಯ ಅಥವಾ ಅಸತ್ಯ. ಅವರು ಅನಿಸಿದ್ದನ್ನು ಹಾಗೆಯೇ ಹೇಳಿ ಮೌನಕ್ಕೆ ಸರಿಯುವ ದಿಟ್ಟ ನಾಯಕ. ಮಿತ ಮಾತಿನ ಸಾಧಕ. ಒಮ್ಮೆ ಹೀಗಾಯಿತು– ಬಂಗಾರಪ್ಪನವರು ನಿಧನರಾದಾಗ ಶಿವಮೊಗ್ಗದಲ್ಲಿ ಶ್ರದ್ಧಾಂಜಲಿ ಸಭೆ. ನಾನೂ ಜಾಫರ್ ಷರೀಫ್ ಅತಿಥಿಗಳು. ಅವರಿಗೆ ಗಂಟಲು ನೋವಿನ ತೀವ್ರತೆಯಿಂದ ಮಾತೇ ಹೊರಡುತ್ತಿರಲಿಲ್ಲ. ಆದರೆ ಮೌನವಾಗಿಯೇ ಸಭೆಯಲ್ಲಿ ಭಾಗವಹಿಸಲು ಬಂದಿದ್ದರು. ಮೌನ ಸಾಕ್ಷಿಯಾಗಿ ಸಭೆಯಲ್ಲಿ ಕೂತಿದ್ದರು. ಅವರ ಮೌನಕ್ಕೆ ಬೆಲೆ ಕಟ್ಟಲಾದೀತೆ? ಅವರ ಮೌನದಲ್ಲಿ ಅದೆಷ್ಟು ಮಾತುಗಳು ಅಡಗಿರಬಹುದು! ಮೌನದೊಳಗಿನ ಮಾತು ಅರ್ಥವಾದರೆ ಅದೇ ನಿಜವಾದ ಶ್ರದ್ಧಾಂಜಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.