ADVERTISEMENT

ಏಜೆಂಟರಿಗೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2018, 19:30 IST
Last Updated 18 ಸೆಪ್ಟೆಂಬರ್ 2018, 19:30 IST

ಪ್ರತಿವರ್ಷ ಪಿಯುಸಿ ಪರೀಕ್ಷೆಗಳು ಮುಗಿದ ನಂತರ, ಹೊರ ರಾಜ್ಯಗಳ ವಿದ್ಯಾರ್ಥಿಗಳು ಮ್ಯಾನೇಜ್‌ಮೆಂಟ್ ಕೋಟಾದಡಿ ಲಕ್ಷಗಟ್ಟಲೆ ರೂಪಾಯಿಗಳನ್ನು ಕರ್ನಾಟಕದ ಹೆಸರಾಂತ ಕಾಲೇಜುಗಳಿಗೆ ಕೊಟ್ಟು ಎಂಜಿನಿಯರಿಂಗ್, ವೈದ್ಯಕೀಯ, ನರ್ಸಿಂಗ್, ಡೆಂಟಲ್ ಮುಂತಾದ ವೃತ್ತಿಪರ ಕೋರ್ಸ್‌ಗಳಲ್ಲಿ ಪ್ರವೇಶ ಪಡೆಯಲು ಹಾತೊರೆಯುತ್ತಾರೆ. ಸೀಟ್‌ ಗಿಟ್ಟಿಸುವ ಸಲುವಾಗಿ ಇಂಥವರು ಕಂಡ ಕಂಡ ‘ಏಜೆಂಟ್‌’ರನ್ನು ಸಂಪರ್ಕಿಸುತ್ತಾರೆ. ಅನೇಕ ಸಂದರ್ಭಗಳಲ್ಲಿ ನಕಲಿ ಏಜೆಂಟರು, ಹೊರನಾಡಿನವರ ಅಸಹಾಯಕತೆಯನ್ನು ದುರುಪಯೋಗಪಡಿಸಿ ಲಕ್ಷಾಂತರ ರೂಪಾಯಿಗಳ ಪಂಗನಾಮ ಹಾಕುವುದು ನಡೆಯುತ್ತಲೇ ಇದೆ. ಇದನ್ನು ತಡೆಯಲು ಸರ್ಕಾರ ಕೆಲವು ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ.

ಮ್ಯಾನೇಜ್‌ಮೆಂಟ್ ಕೋಟಾದಡಿಯ ಸೀಟ್‌ಗಳನ್ನು ಪಡೆಯುವಾಗ ‘ಅಧಿಕೃತ’ ಏಜೆಂಟರು ಇರಬೇಕು. ಏಜೆಂಟರು ಆಯಾ ಕಾಲೇಜುಗಳಿಂದ ‘ವಿಶ್ವಾಸಾರ್ಹ ಪತ್ರ’ ಪಡೆದಿರಬೇಕೆಂದು ಶಿಕ್ಷಣ ಇಲಾಖೆ ಫರ್ಮಾನು ಹೊರಡಿಸಬೇಕು. ಕಾಲೇಜಿನವರು ‘ವಿಶ್ವಾಸಾರ್ಹತಾ ಪತ್ರ’ವನ್ನು ಸ್ಥಳೀಯ ಬ್ಯಾಂಕ್‌ಗಳಿಂದ ಏಜೆಂಟ್ ಪಡೆದಿರುವ ಬ್ಯಾಂಕ್ ಗ್ಯಾರಂಟಿಯ ಆಧಾರದ ಮೇಲೆ ಕೊಡಬೇಕು. ಅಧಿಕೃತ ಏಜೆಂಟರ ಮೂಲಕವೇ ಸೀಟು ವಿತರಣೆ ಮಾಡಿದರೆ, ಲಕ್ಷಗಟ್ಟಲೆ ರೂಪಾಯಿ ಕೊಡುವ ಹೆತ್ತವರಿಗೆ, ಕಾಲೇಜುಗಳಿಂದ ಪಡೆದಿರುವ ‘ವಿಶ್ವಾಸಾರ್ಹತಾ ಪತ್ರ’ದ ಮೇಲೆ ನಂಬಿಕೆ ಬರುತ್ತದೆ. ಹೆತ್ತವರು ಏಜೆಂಟರ ‘ವಿಶ್ವಾಸಾರ್ಹತಾ ಪತ್ರ’ದ ಬಗ್ಗೆ ಕಾಲೇಜುಗಳನ್ನು ಸಂಪರ್ಕಿಸಿ (ನಕಲಿ ಏಜೆಂಟರಲ್ಲವೆಂದು ತಿಳಿಯಲು) ವಿಶ್ವಾಸಾರ್ಹತೆಯನ್ನು ದೃಢೀಕರಿಸಿಕೊಳ್ಳಬಹುದು. ಈ ವ್ಯವಸ್ಥೆಯನ್ನು ಜಾರಿಗೊಳಿಸಿದರೆ ಏಜೆಂಟರು ಹಣವನ್ನು ದುರುಪಯೋಗ ಮಾಡುವ ಸಂದರ್ಭ ಇರುವುದಿಲ್ಲ.

ಕೆ.ಎನ್. ಭಗವಾನ್, ಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.