ರಾಹುಲ್ ಗಾಂಧಿ ಅವರು ನಡೆಸುತ್ತಿರುವ ‘ಭಾರತ್ ಜೋಡೊ’ ಯಾತ್ರೆ ಕುರಿತ ರಾಜಾರಾಮ ತೋಳ್ಪಾಡಿ ಮತ್ತು ನಿತ್ಯಾನಂದ ಬಿ. ಶೆಟ್ಟಿ ಅವರ ಲೇಖನವನ್ನು ಓದಿದಾಗ (ಪ್ರ.ವಾ., ಡಿ. 15), ಹಿಂದಿನ ಬೇಸರ ಮರುಕಳಿಸಿತು. ಯಾತ್ರೆಯ ಬಗೆಗಿನ ಈ ಎಲ್ಲ ಸಕಾರಾತ್ಮಕ ವಿಶ್ಲೇಷಣೆ, ಆಶಯ, ನಿರೀಕ್ಷೆಗಳು, ರಾಜ್ಯದಲ್ಲಿ ಅಧಿಕಾರ ಹಿಡಿಯುವ ತರಾತುರಿಯಲ್ಲಿರುವ ಕಾಂಗ್ರೆಸ್ ಪಕ್ಷದಲ್ಲಿ, ಅದರ ಮುಖಂಡರಲ್ಲಿ ಕಿಂಚಿತ್ತಾದರೂ ಕಂಡುಬರುತ್ತಿವೆಯೇ? ಅಷ್ಟೇಕೆ, ಈಗಾಗಲೇ ಅಧಿಕಾರ ಹಿಡಿದಿರುವ ಹಿಮಾಚಲ ಪ್ರದೇಶದ (ಅಲ್ಲಿ ಭಾರತ ಜೋಡಿಸುವ ಯಾತ್ರೆ ಕೂಡ ಪ್ರಭಾವ ಬೀರಿರುತ್ತದೆ ಎಂದು ಸ್ವತಃ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ) ಸರ್ಕಾರದ ನಡೆ ನುಡಿಗಳಲ್ಲಿ ಏನಾದರೂ ಬದಲಾವಣೆ ಬಯಸಬಹುದೇ? ಸಕಾರಾತ್ಮಕ ಉತ್ತರ ನಿರೀಕ್ಷಿಸಲು ಸ್ವಲ್ಪ ಕಷ್ಟವಾಗುತ್ತದೆ.
ಬಹುಶಃ ಇದು ಜನತಂತ್ರದ ಇತಿಮಿತಿಗಳು, ಶಕ್ತಿ ರಾಜಕಾರಣದ ಕಟು ವಾಸ್ತವವಾಗಿರಬಹುದು. ಅಂದಮೇಲೆ ಈ ಹೋರಾಟ, ಚಳವಳಿ, ಅವುಗಳಲ್ಲಿ ಏಳುವ ‘ಬಿಸಿ ಕಾವು’ಗಳೆಲ್ಲಾ ಹುಸಿಯೇ ಅವಾಸ್ತವಿಕವೇ ಎನ್ನುವ ಪ್ರಶ್ನೆ ಎತ್ತಲೂ ಧೈರ್ಯವಿಲ್ಲ. ಇದೇನು ಹೊಸತಲ್ಲ, ಚಾರಿತ್ರಿಕ ಸತ್ಯ ಕೂಡ. ಸ್ವಾತಂತ್ರ್ಯ ಚಳವಳಿ ನಂತರದ ನೆಹರೂ ನೇತೃತ್ವದ ಕಾಂಗ್ರೆಸ್ ಪಕ್ಷದ ಅಧಿಕಾರವಾಗಲಿ, ಜೆ.ಪಿ. ಮುಂಚೂಣಿಯ ಹೋರಾಟದ ಫಲ ಕಂಡ ಜನತಾ ಪಕ್ಷದ ಅಧಿಕಾರವಾಗಲಿ, ಜಾಗತಿಕ ಮಟ್ಟದಲ್ಲಿ ನೋಡಿದರೂ ನೆಲ್ಸನ್ ಮಂಡೇಲ ಅವರ ಹೋರಾಟದ ಫಲ ಕಂಡ ದಕ್ಷಿಣ ಆಫ್ರಿಕಾದ ಪರಿಸ್ಥಿತಿಯಾಗಲಿ ಇದಕ್ಕಿಂತ ಬೇರೆಯೇನಲ್ಲ. ಇದೇನು ನೆಮ್ಮದಿ ತರುವ ವಿಚಾರವಲ್ಲ. ಈ ಯೋಚನೆ ಯಾವ ನಿರ್ಣಯದತ್ತ ಕೊಂಡೊಯ್ಯುತ್ತಿದೆ ಅನ್ನುವುದೂ ಗೊತ್ತಿಲ್ಲ.
- ಪ್ರಕಾಶ್ ಕಮ್ಮರಡಿ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.