‘ಕಪ್ಪುಹಣವು ರಾಷ್ಟ್ರದಲ್ಲಿ ಪ್ರತಿ ಆರ್ಥಿಕ ವ್ಯವಸ್ಥೆಯಾಗಿ ಕೆಲಸ ಮಾಡುತ್ತಿದೆ’ ಎಂದು ಕೇಂದ್ರ ಹಣಕಾಸು ಸಚಿವರಾಗಿದ್ದ ವೈ.ಬಿ.ಚವಾಣ್ ಅವರು ರಾಜ್ಯಸಭೆಯಲ್ಲಿ ಒಪ್ಪಿಕೊಂಡಿದ್ದು, ಅದನ್ನು ಹೊರತೆಗೆಯುವ ಬಗ್ಗೆ ದೀರ್ಘಾವಧಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿರುವುದು ಪತ್ರಿಕೆಯ ‘50 ವರ್ಷಗಳ ಹಿಂದೆ’ ಅಂಕಣದಲ್ಲಿ ಪ್ರಕಟವಾಗಿದೆ (ಪ್ರ.ವಾ., ಮೇ 17). ಸ್ವಾತಂತ್ರ್ಯ ಲಭಿಸಿದ ಎರಡೇ ದಶಕಗಳಿಗೆ ಈ ಕಪ್ಪುಹಣದ ಸಮಸ್ಯೆಯನ್ನು ದೇಶ ಎದುರಿಸಬೇಕಾಗಿ ಬಂದಿದ್ದು ಇಂದಿನವರಿಗೆ ಅಚ್ಚರಿಯ ಸಂಗತಿ. ಈಗಲೂ ಸ್ವಿಸ್ ಬ್ಯಾಂಕುಗಳಲ್ಲಿ ಭಾರಿ ಪ್ರಮಾಣದಲ್ಲಿ ಕಪ್ಪುಹಣ ಇದ್ದು, ಹೊರತಂದೇ ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದನ್ನು ಜನ ಮರೆತಿಲ್ಲ ಹಾಗೂ ಅದು ಕಾರ್ಯಗತವಾಗಿಲ್ಲ.
ಐವತ್ತು ವರ್ಷಗಳಿಂದಲೂ ಈ ಸಂಬಂಧ ಪ್ರಯತ್ನ ನಡೆಯುತ್ತಿದ್ದರೂ ಅದು ಪೂರ್ಣವಾಗಿಲ್ಲ (ಬಹುಶಃ ಆಗುವುದೂ ಇಲ್ಲ). ಆಳುವ ನಾಯಕರು, ಆಳುವ ಪಕ್ಷಗಳು ಬದಲಾದರೂ ಸಮಸ್ಯೆ ಕೊನೆಗಾಣಲಿಲ್ಲ. ಹಾಗಾದರೆ ಇನ್ನೂ ಎಷ್ಟು ವರ್ಷಗಳ ಕಾಲಾವಕಾಶ ಬೇಕು? ನಾವು ಆ ಕ್ಷಣವನ್ನು ನೋಡುತ್ತೇವೆಯೇ?
–ಪತ್ತಂಗಿ ಎಸ್. ಮುರಳಿ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.