ADVERTISEMENT

ಕೇಬಲ್ ಮಾಫಿಯಾದ ಕಪಿಮುಷ್ಟಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 19:35 IST
Last Updated 22 ನವೆಂಬರ್ 2022, 19:35 IST

ವಿಶ್ವಕಪ್ ಫುಟ್‌ಬಾಲ್‌ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ನೇರ ವೀಕ್ಷಣೆಗಾಗಿ ನಾನು ಇದೇ 20ರಂದು ಸಂಜೆ ಭಾರತೀಯ ಕಾಲಮಾನ 7.30ಕ್ಕೆ ಟಿ.ವಿ.ಯ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಹುಡುಕಾಡಿದರೂ ಪ್ರಸಾರ ಲಭ್ಯವಿರಲಿಲ್ಲ. ನಮ್ಮ ಕೇಬಲ್ ಆಪರೇಟರ್‌ಗೆ ಕರೆ ಮಾಡಿದಾಗ, ಈ ಪ್ರಸಾರದ ಹಕ್ಕು ಪಡೆದಿರುವ ಸ್ಪೋರ್ಟ್ಸ್– 18 ಒಂದು ಪೇ ಚಾನೆಲ್ ಆಗಿದ್ದು, ಪ್ರತ್ಯೇಕ ಹಣ ಪಾವತಿಸಿ ಅದರ ಸಂಪರ್ಕ ಪಡೆಯಬೇಕು ಎಂದು ತಿಳಿಸಿದರು. ಈಗಾಗಲೇ ಕೇಬಲ್‌ನವರು ಪ್ರತೀ 28 ದಿನಗಳಿಗೊಮ್ಮೆ (ನೆನಪಿರಲಿ, ಒಂದು ತಿಂಗಳು ಎಂದರೆ ಕೇಬಲ್ ಮತ್ತು ಮೊಬೈಲ್‌ ಕಂಪನಿಗಳ ಲೆಕ್ಕದಲ್ಲಿ 28 ದಿನಗಳು ಮಾತ್ರ!) ₹ 280ರಿಂದ 300 ಅನ್ನು ಪ್ಯಾಕೇಜ್ ಲೆಕ್ಕದಲ್ಲಿ ಪಡೆಯುತ್ತಾರೆ. ಒಂದೆರಡು ವರ್ಷಗಳ ಹಿಂದೆ ಕೇಬಲ್ ಸಂಪರ್ಕದಲ್ಲಿ ಲಭ್ಯವಿದ್ದ ಯಾವುದೇ ಚಾನೆಲ್‌ಗಳನ್ನು ವೀಕ್ಷಿಸಬಹುದಾಗಿತ್ತು. ಆದರೆ ಇದೀಗ ಭಾಷಾವಾರು ಪ್ರಾಂತ್ಯಗಳಿಗೆ ಅನುಗುಣವಾಗಿ ಆಯಾ ರಾಜ್ಯಕ್ಕೆ ಆಯಾ ಭಾಷೆಯ ಪ್ಯಾಕೇಜ್ ಮಾಡಿ, ಉಳಿದಂತೆ ದೂರದರ್ಶನದವರ ಉಚಿತ ಚಾನೆಲ್‌ಗಳನ್ನು ನೀಡುತ್ತಿದ್ದಾರೆ. ಇದರಿಂದ ವೀಕ್ಷಕರು ತಮಗೆ ಬೇಕಾದ ಬೇರೆ ಭಾಷೆಯ ಉತ್ತಮ ಕಾರ್ಯಕ್ರಮಗಳು ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ.

ಇಂದು ಗ್ರಾಹಕರು ಕೇಬಲ್ ಮಾಫಿಯಾದ ಕಪಿಮುಷ್ಟಿಯಲ್ಲಿ ಸಿಲುಕಿದ್ದಾರೆ. ಇವರನ್ನು ನಿಯಂತ್ರಿಸಬೇಕಾದ
‘ಟ್ರಾಯ್’ ಗ್ರಾಹಕರ ಕೈಗೆ ಸಿಗುತ್ತಿಲ್ಲ. ಇನ್ನು ಸುದ್ದಿ ಚಾನೆಲ್‌ಗಳಿಗೆ ಕೇಬಲ್‌ನವರೇ ಚಿನ್ನದ ಮೊಟ್ಟೆ ಇಡುವ
ಕೋಳಿಯಾಗಿರುವುದರಿಂದ ಕೇಬಲ್ ಗ್ರಾಹಕರಿಗೆ ಆಗುತ್ತಿರುವ ಕಿರಿಕಿರಿಯ ಬಗ್ಗೆ ಯಾರೂ ವರದಿ ಮಾಡುವುದಿಲ್ಲ. ಅಷ್ಟೇಕೆ ರಾಜಕಾರಣಿಗಳೂ ಇವರ ತಂಟೆಗೆ ಹೋಗುವುದಿಲ್ಲ. ಹೋದರೆ ಕೇಬಲ್ ಪ್ರಸಾರ ಬಂದ್ ಮಾಡಬಹುದು, ಇದರಿಂದ ತಾವು ಮೂಲೆಗುಂಪಾಗಬಹುದು ಎಂಬ ಭಯ! ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ, ವೀಕ್ಷಕರಿಗೆ ಕ್ರೀಡಾ ಚಾನೆಲ್‌ ಸೇರಿದಂತೆ ಎಲ್ಲಾ ಚಾನೆಲ್‌ಗಳು ಲಭ್ಯವಾಗುವಂತೆ ಮಾಡಲಿ. ಗ್ರಾಹಕರು ಪಾವತಿಸಿದ ಹಣಕ್ಕೆ ನ್ಯಾಯ ದೊರೆಯುವಂತಾಗಲಿ.

ಮುಳ್ಳೂರು ಪ್ರಕಾಶ್, ಮೈಸೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.