ADVERTISEMENT

ಅನಾಹುತ ಘಟಿಸುವ ಮೊದಲೇ ಎಚ್ಚರಗೊಳ್ಳಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 20:00 IST
Last Updated 20 ಜನವರಿ 2020, 20:00 IST

ಯಾದಗಿರಿ ತಾಲ್ಲೂಕಿನ ಆರ್.ಹೊಸಳ್ಳಿ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿರುವ ಏಕೈಕ ಕೊಠಡಿಯಲ್ಲಿ, ಒಂದರಿಂದ ಐದನೇ ತರಗತಿವರೆಗಿನ 76 ವಿದ್ಯಾರ್ಥಿಗಳ ಜೊತೆಗೆ ಮುಖ್ಯ ಶಿಕ್ಷಕರ ಕುರ್ಚಿ, ಸಿಲಿಂಡರ್, ಗ್ಯಾಸ್ ಸ್ಟೌ, ಅಡುಗೆ ಸಾಮಗ್ರಿಯಂತಹ ವಸ್ತುಗಳೆಲ್ಲವನ್ನೂ ಇಡಬೇಕಾಗಿದೆ! (ಪ್ರ.ವಾ., ಜ. 20).

ಇಂತಹ ಅವ್ಯವಸ್ಥೆಯಲ್ಲಿ ಕುಳಿತು ಪಾಠ ಕೇಳಬೇಕಾದ ಕರ್ಮ ಮಕ್ಕಳದು. ಸರ್ಕಾರ ಒಂದೆಡೆ ಶಿಕ್ಷಣಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತದೆ. ಇನ್ನೊಂದೆಡೆ, ದನದ ಕೊಟ್ಟಿಗೆಯಂತಹ ಗೂಡಿನಲ್ಲಿ ಮಕ್ಕಳು ಕುಳಿತುಕೊಳ್ಳಬೇಕಾದ ಸ್ಥಿತಿ ಇದೆ. ಹೀಗಿರುವಾಗ, ಪಾಠವನ್ನು ಅವರು ಎಷ್ಟರ ಮಟ್ಟಿಗೆ ಗ್ರಹಿಸಲು ಸಾಧ್ಯ? ಕಲಿಕೆಗೆ ಬೇಕಾದ ಏಕಾಗ್ರತೆ ಅವರಲ್ಲಿ ಮೂಡಲು ಸಾಧ್ಯವೇ? ಈ ಪರಿಸ್ಥಿತಿಯು ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಅವರು ಜಾಗದ ಕೊರತೆಯ ನೆಪ ಹೇಳಿ ದಿನ ದೂಡುತ್ತಿದ್ದಾರೆ.

ಇಂತಹ ಸ್ಥಳದಲ್ಲಿ ತಮ್ಮ ಮಕ್ಕಳು ಓದುತ್ತಿದ್ದರೆ ಈ ಅಧಿಕಾರಿಗಳು ಸುಮ್ಮನಿರುತ್ತಿದ್ದರೇ? ಶಿಕ್ಷಣ ಸಚಿವರು ಶಾಲಾ ವಾಸ್ತವ್ಯ ಮಾಡಬೇಕಿರುವುದು ಇಂತಹ ಶಾಲೆಗಳಲ್ಲಿ. ದಯವಿಟ್ಟು ಒಮ್ಮೆಯಾದರೂ ವಾಸ್ತವ್ಯಕ್ಕೆ ಅವರು ಈ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲಿ. ಮಕ್ಕಳ ಜೀವ ಅಮೂಲ್ಯವಾದುದು. ಅಷ್ಟೊಂದು ಮಕ್ಕಳಿರುವ ಕೋಣೆಯಲ್ಲಿ ಅಡುಗೆ ಅನಿಲ ಸಿಲಿಂಡರ್‌ ಸಹ ಇರುತ್ತದೆ. ಏನಾದರೂ ಅನಾಹುತ ಘಟಿಸುವ ಮೊದಲೇ ಸರ್ಕಾರ ಅಲ್ಲಿನ ಸಮಸ್ಯೆಯನ್ನು ಪರಿಹರಿಸಲಿ.

ADVERTISEMENT

-ರಾಜು ಬಿ. ಲಕ್ಕಂಪುರ,ಜಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.