ಇನ್ನು ಮೂರ್ನಾಲ್ಕು ದಿನಗಳಿಗೆ ಆಗುವಷ್ಟು ಮಾತ್ರ ಕಲ್ಲಿದ್ದಲು ಲಭ್ಯವಿದೆ ಎಂಬ ಸುದ್ದಿ ಕಳೆದ ವಾರ ಬಂದಾಗ, ವಿದ್ಯುತ್ ಸಮಸ್ಯೆಯ ಭೀತಿಯಿಂದಾಗಿ ದೇಶದಾದ್ಯಂತ ತಲ್ಲಣ, ಕೋಲಾಹಲ ಉಂಟಾಯಿತು. ಆದರೆ, ಇನ್ನೂ ಕೆಲ ದಿನಗಳಿಗೆ ಬೇಕಾಗುವಷ್ಟು ಕಲ್ಲಿದ್ದಲು ಪೂರೈಕೆ ಇದೆ, ಭಯ ಬೇಡ ಎಂದು ಕೇಂದ್ರ ಕಲ್ಲಿದ್ದಲು ಖಾತೆ ಸಚಿವರು ಪ್ರತಿಕ್ರಿಯಿಸಿದರು.
ಬಹುಪಾಲು ವಿದ್ಯುತ್ ಸ್ಥಾವರಗಳು ಕಲ್ಲಿದ್ದಲು ಆಧಾರಿತ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಲ್ಲಿದ್ದಲಿನ ಬೆಲೆ ಹೆಚ್ಚಿ ಪೂರೈಕೆ ಕಡಿಮೆಯಾಯಿತು. ಇತ್ತ ದೇಶದಲ್ಲಿ ಮುಂಗಾರು ಕಾರಣ ಆಂತರಿಕ ಉತ್ಪಾದನೆಯೂ ಕುಂಠಿತವಾಗಿತ್ತು. ಇದೀಗ ಮುಂಗಾರು ಮುಕ್ತಾಯವಾಗುತ್ತಿರುವುದರಿಂದ ಪೂರೈಕೆ ಸುಧಾರಿಸಲಿದೆ ಎಂಬ ಆಶಾ ಭಾವ ಇದೆ. ಇದೆಲ್ಲಾ ಸರಿಯೇ. ಆದರೆ ಅಭಾವ ಉಂಟಾಗುವ ಅಂದಾಜು ಸರ್ಕಾರಕ್ಕೆ ಇರಲಿಲ್ಲವೇ? ಇದ್ದಿದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು.
ವಿದ್ಯುತ್ ಉತ್ಪಾದನೆ ಕಡಿಮೆಯಾದರೆ ಅದರಿಂದ ಬೇರೆ ಬೇರೆ ರೀತಿಯ ಪರಿಣಾಮಗಳೂ ಆಗುತ್ತವೆ. ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಪೂರೈಕೆಗೆ ವ್ಯತ್ಯಯವಾಗುತ್ತದೆ ಎಂಬ ಸುದ್ದಿಯನ್ನು ಸ್ವತಃ ವಿದ್ಯುತ್ ಸರಬರಾಜು ಕಂಪನಿಗಳೇ ಹಬ್ಬಿಸಿ ಜನರಲ್ಲಿ ಗೊಂದಲ ಸೃಷ್ಟಿಸಿವೆ ಎಂಬುದು ವಿದ್ಯುತ್ ಸಚಿವರ ಆರೋಪ. ಇದು ನಿಜವಾಗಿದ್ದರೆ ಸಲ್ಲದ ನಡವಳಿಕೆ ಎಂದೇ ಹೇಳಬೇಕಾಗುತ್ತದೆ. ಇದೇ ಸಮಯ ಎಂದುಕೊಂಡು ಪ್ರತಿಪಕ್ಷಗಳೂ ಸರ್ಕಾರದ ಮೇಲೆ ಮುಗಿಬಿದ್ದಿವೆ. ದೆಹಲಿ ಕಗ್ಗತ್ತಲಿಗೆ ಸರಿಯಲಿದೆ ಎಂದು ಅಲ್ಲಿನ ಉಪಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಈ ರೀತಿಯ ಹೇಳಿಕೆಗಳು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುತ್ತವೆ. ಸಮಸ್ಯೆ ಇದ್ದರೂ ಅದನ್ನು ಸೂಕ್ತವಾಗಿ ಹೇಗೆ ಪರಿಹರಿಸಬಹುದು ಎಂಬುದರ ಬಗ್ಗೆ ಎಲ್ಲರೂ ಗಮನ ಹರಿಸಬೇಕೇ ಹೊರತು ಗೊಂದಲ ಸೃಷ್ಟಿಸಬಾರದು. ಇದರಿಂದ ಯಾರಿಗೂ ಲಾಭವಿಲ್ಲ.
ಬೇ.ನ.ಶ್ರೀನಿವಾಸಮೂರ್ತಿ,ತುಮಕೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.