ADVERTISEMENT

ಇತಿಹಾಸದ ವಿಪರ್ಯಾಸ!

​ರಾಜಕುಮಾರ ವಿ.ಕುಲಕರ್ಣಿ ಬಾಗಲಕೋಟೆ
Published 24 ಸೆಪ್ಟೆಂಬರ್ 2018, 19:30 IST
Last Updated 24 ಸೆಪ್ಟೆಂಬರ್ 2018, 19:30 IST
   

ಭಾರತವು ಸ್ವಾತಂತ್ರ್ಯ ಪಡೆಯುವುದರ ಜೊತೆ ಜೊತೆಗೇ ದೇಶದ ವಿಭಜನೆಯೂ ನಡೆದುಹೋಯಿತು. ಒಂದೇ ನೆಲದಲ್ಲಿ ಬಾಳಿ ಬದುಕಿದ್ದ ಜನ ಹಿಂದುಸ್ತಾನ್ ಮತ್ತು ಪಾಕಿಸ್ತಾನ್ ಎನ್ನುವ ಎರಡು ಪ್ರತ್ಯೇಕ ರಾಷ್ಟ್ರಗಳಲ್ಲಿ ಹರಿದು ಹಂಚಿ ಹೋದರು. ಇದಾಗಿ ದಶಕಗಳೇ ಕಳೆದರೂ ಭಾರತ– ಪಾಕ್‌ ನಡುವಿನ ಕಲಹ ಮುಂದುವರಿಯುತ್ತಲೇ ಇದೆ.

‘ಪಾಕಿಸ್ತಾನದ ಹುಟ್ಟಿಗೆ ಮತ್ತು ಇವತ್ತಿನ ಎಲ್ಲ ಸಮಸ್ಯೆಗಳಿಗೆ ಗಾಂಧಿಯೇ ಕಾರಣ’ ಎಂದು ಆರೋಪಿಸುವ ಜನರ ದೊಡ್ಡ ಪಡೆ ಭಾರತದಲ್ಲಿದೆ. ಹೀಗೆ ಆರೋಪಿಸುವವರು ಜಿನ್ನಾ ಎಂಬ ವ್ಯಕ್ತಿಯನ್ನು ಮರೆತುಬಿಡುತ್ತಾರೆ. ಮರೆಯುವುದಿರಲಿ, ‘ದೇಶ ವಿಭಜನೆಗೆ ಜಿನ್ನಾ ಕಾರಣರಲ್ಲ’ ಎಂಬ ವಾದವನ್ನೂ ಅವರು ಮಂಡಿಸುತ್ತಾರೆ. ಅವರ ಪ್ರಕಾರ ಜಿನ್ನಾ ಗಡ್ಡ ಬಿಟ್ಟಿರಲಿಲ್ಲ, ವಿದೇಶದಲ್ಲಿ ಶಿಕ್ಷಣ ಪಡೆದಿದ್ದರು ಮತ್ತು ಪಾರ್ಸಿ ಹೆಣ್ಣುಮಗಳನ್ನು ಮದುವೆಯಾಗಿದ್ದರು. ಮದ್ಯ ಸೇವಿಸುತ್ತಿದ್ದ ಜಿನ್ನಾ ಧರ್ಮಾಂಧರಾಗಿರಲಿಲ್ಲ. ಜಿನ್ನಾಗೆ ಪ್ರತ್ಯೇಕ ಮುಸ್ಲಿಂ ರಾಷ್ಟ್ರ ಬೇಕಿರಲಿಲ್ಲ. ಆದ್ದರಿಂದ ಪಾಕಿಸ್ತಾನದ ಹುಟ್ಟಿಗೆ ಗಾಂಧಿಯೇ ಕಾರಣ ಎಂದು ಇವರು ವಾದಿಸುತ್ತಾರೆ.

ಆದರೆ ಅಧಿಕಾರದ ಆಸೆ ಜಿನ್ನಾ ಅವರೊಳಗೇ ಅಂತರ್ಗತವಾಗಿತ್ತು. ಅಖಂಡ ಹಿಂದುಸ್ತಾನದ ಪ್ರಧಾನಿಯಾಗಬೇಕೆಂಬ ಆಸೆ ಇಟ್ಟುಕೊಂಡೇ ಅವರು ರಾಷ್ಟ್ರೀಯ ಕಾಂಗ್ರೆಸ್‍ನ ಸದಸ್ಯರಾದದ್ದು. ಯಾವಾಗ ನೆಹರೂ ಹೆಸರು ಪ್ರಧಾನಿ ಸ್ಥಾನಕ್ಕೆ ಕೇಳಿಬರತೊಡಗಿತೋ ಆಗ ಜಿನ್ನಾ ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಆಟ ಶುರು ಮಾಡಿದರು. ಒಡೆದು ಆಳುವ ನೀತಿಗೆ ಹೆಸರಾದ ಬ್ರಿಟಿಷರು ಜಿನ್ನಾರ ಆ ಮನೋಭಾವವನ್ನು ತಮ್ಮ ಅನುಕೂಲಕ್ಕೆ ಸರಿಯಾಗಿಯೇ ಬಳಸಿಕೊಂಡರು.

ADVERTISEMENT

ಪಾಕಿಸ್ತಾನದ ಸೃಷ್ಟಿಗೆ ಗಾಂಧಿಯೇ ಕಾರಣ ಎನ್ನುವವರು 1946ರ ಅಕ್ಟೋಬರ್ 6 ರಂದು ಗಾಂಧೀಜಿ ‘ಹರಿಜನ’ ಪತ್ರಿಕೆಗೆ ಬರೆದ ಲೇಖನವನ್ನು ಓದಬೇಕು. ಅಲ್ಲಿ ಪಾಕಿಸ್ತಾನವನ್ನು ಸೃಷ್ಟಿಸುವುದಕ್ಕಾಗಿ ಭಾರತದ ವಿಭಜನೆಯಾಗಬೇಕು ಎನ್ನುವ ಅಭಿಪ್ರಾಯಕ್ಕೆ ಉತ್ತರವಾಗಿ ಗಾಂಧೀಜಿ ಹೀಗೆ ಬರೆಯುತ್ತಾರೆ: ‘ಮುಸ್ಲಿಂ ಲೀಗ್‍ನಿಂದ ಪ್ರತ್ಯೇಕ ಪಾಕಿಸ್ತಾನಕ್ಕಾಗಿ ಪ್ರಸ್ತಾಪಿಸಲ್ಪಟ್ಟಿರುವ ಬೇಡಿಕೆಯು ಇಸ್ಲಾಂ ನೀತಿಯಿಂದ ಹೊರತಾಗಿದೆಯಾದ್ದರಿಂದ ಇದನ್ನು ಪಾಪವೆಂದು ಕರೆಯಲು ನಾನು ಹಿಂಜರಿಯುವುದಿಲ್ಲ. ಮನುಕುಲದ ಒಗ್ಗಟ್ಟು ಹಾಗೂ ಭ್ರಾತೃತ್ವದ ಸಂಕೇತವಾಗಿ ಇಸ್ಲಾಂ ನಿಲ್ಲುತ್ತದೆಯೇ ಹೊರತು ಮಾನವ ಕುಟುಂಬದ ಏಕತೆಯನ್ನು ಒಡೆದು ಹಾಕುವುದಕ್ಕಲ್ಲ. ಆದ್ದರಿಂದ ಭಾರತವನ್ನು ವಿಭಜಿಸಿ ಸಂಭವನೀಯ ಯುದ್ಧ ಗುಂಪುಗಳಾಗಿ ಮಾಡಲು ಯಾರು ಪ್ರಯತ್ನ ಮಾಡುತ್ತಾರೋ ಅಂಥವರು ಭಾರತ ಮತ್ತು ಇಸ್ಲಾಂ ಎರಡಕ್ಕೂ ಬದ್ಧ ವೈರಿಗಳು. ಇಂಥ ಪ್ರಯತ್ನಕ್ಕೆ ಕೈಹಾಕುವವರು ಬೇಕಾದರೆ ನನ್ನನ್ನು ಕತ್ತರಿಸಿ ತುಂಡು ತುಂಡು ಮಾಡಬಹುದು. ಆದರೆ ನಾನು ಯಾವುದನ್ನು ತಪ್ಪು ಎಂದು ಭಾವಿಸಿರುವೆನೋ ಅದನ್ನು ಒಪ್ಪಿಕೊಳ್ಳುವಂತೆ ಮಾಡುವುದು ಅವರಿಂದ ಸಾಧ್ಯವಿಲ್ಲ’. ಆದರೆ ಗಾಂಧೀಜಿಯ ಆಶಯಕ್ಕೆ ವಿರುದ್ಧವಾಗಿ ಭಾರತದ ವಿಭಜನೆಯಾಗುತ್ತದೆ.

ರಾಮಚಂದ್ರ ಗುಹಾ ಅವರ, ‘ಇಸ್ಲಾಂ ಬಗ್ಗೆ ಏನೂ ಗೊತ್ತಿಲ್ಲದ ಮಾತ್ರವಲ್ಲ ಮುಸ್ಲಿಮರ ಬಗ್ಗೆ ಏನೂ ಗೊತ್ತಿಲ್ಲದ ಮತ್ತು ಏನನ್ನಾದರೂ ತಿಳಿದುಕೊಳ್ಳಲು ಆಸಕ್ತಿಯೂ ಇಲ್ಲದ ವ್ಯಕ್ತಿ ಮುಸ್ಲಿಮರಿಗಾಗಿ ಸ್ವತಂತ್ರ ದೇಶವೊಂದನ್ನು ಸೃಷ್ಟಿಸಿಕೊಟ್ಟರು’ ಎಂಬ ಅಭಿಪ್ರಾಯ ಇತಿಹಾಸದ ವಿಪರ್ಯಾಸಗಳಲ್ಲೊಂದು. ‘ಅಖಂಡ ಹಿಂದುಸ್ತಾನದ ವಿಭಜನೆಗೆ ಗಾಂಧಿಯೇ ಕಾರಣ’ ಎನ್ನುವವರಿಗೆ ಗುಹಾ ಲೇಖನ ಉತ್ತರವಾಗಿದೆ.

ಇತಿಹಾಸ ಎನ್ನುವುದು ಕಥೆ, ಪುರಾಣದಂತೆ ದಂತಕಥೆಯಾಗದೆ, ಅದು ವಸ್ತುನಿಷ್ಠವಾಗಿರಬೇಕು. ಇಲ್ಲದಿದ್ದಲ್ಲಿ ಐತಿಹಾಸಿಕ ವ್ಯಕ್ತಿಗಳು ನಂತರದ ಪೀಳಿಗೆಯ ಅನುಮಾನ ಮತ್ತು ಅಪವಾದಗಳಿಗೆ ಗುರಿಯಾಗಬೇಕಾಗುತ್ತದೆ. ಇತಿಹಾಸದಲ್ಲಿ ಅನುಮಾನ ಮತ್ತು ಅಪವಾದಗಳಿಗೆ ಗಾಂಧಿ ಎದುರಾದಷ್ಟು ಬೇರೆ ಯಾರೂ ಎದುರಾಗಿಲ್ಲದಿರುವುದು ಕೂಡ ಇತಿಹಾಸದ ವಿಪರ್ಯಾಸಗಳಲ್ಲೊಂದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.