ಹಿಂದೆ ನಮಗೆ ಮಧ್ಯವಾರ್ಷಿಕ ಪರೀಕ್ಷೆಗಳು ಗಾಂಧಿಜಯಂತಿಗಿಂತ ಮುಂಚೆಯೇ ಮುಗಿಯುತ್ತಿದ್ದವು. ಗಾಂಧಿ ಜಯಂತಿ ನಂತರ ದಸರಾ ರಜೆ ಶುರುವಾದರೆ, ನವೆಂಬರ್ ಎರಡರಂದೇ ನಾವು ಶಾಲೆಗೆ ಹೋಗುತ್ತಿದ್ದದ್ದು. ಅಷ್ಟು ದಿನಗಳಲ್ಲಿ ದಸರೆ ಹಬ್ಬವನ್ನು ಮೈಸೂರಿನ ನೆಂಟರ ಮನೆಗಳಲ್ಲಿ ಸಂಭ್ರಮಿಸುತ್ತಾ ಅಥವಾ ಹಳ್ಳಿಗಳಲ್ಲಿ ಅಜ್ಜ– ಅಜ್ಜಿಯ ಮನೆಯಲ್ಲಿ ಹಾಗೂ ನೆಂಟರಿಷ್ಟರ ಮನೆಗಳಲ್ಲಿ ಕಳೆಯುತ್ತಿದ್ದೆವು. ಗುಡ್ಡ, ಕಾಡು ಮೇಡು ಅಲೆಯುವುದು, ಪ್ರಕೃತಿಯ ರಮಣೀಯ ಸೌಂದರ್ಯ ಆಸ್ವಾದಿಸುವ ಪರಿ ಚೆನ್ನಾಗಿತ್ತು. ಎತ್ತು, ಹಸು, ಕುರಿ ಮೇಯಿಸಲು ಹೋಗುವುದು, ಅಡವಿಗೆ ಹೋಗಿ ಹುಲ್ಲು ತರುವುದು ಮಕ್ಕಳಿಗೆ ಆಹ್ಲಾದಕರ ವಾತಾವರಣ ಸೃಷ್ಟಿಸುತ್ತಿದ್ದವು.
ಆದರೆ ಈಗ ಕೊಡುವ ಕೇವಲ ಒಂದು ವಾರದ ದಸರಾ ರಜೆ ನಿಜಕ್ಕೂ ಸಜೆಯಂತಿದೆ. ಯಾವ ಊರಿಗೂ ಹೋಗಿ ನೆಮ್ಮದಿಯಿಂದ ಇರಲು ಆಗುತ್ತಿಲ್ಲ. ತಾತ, ಅಜ್ಜಿ, ಆಪ್ತೇಷ್ಟರ ಜೊತೆ ಮಕ್ಕಳು ಬೆರೆತು ಕೌಟುಂಬಿಕ ಮೌಲ್ಯಗಳನ್ನು ಕಲಿಯುವ ಮಾತು ದೂರವಾಗಿದೆ. ಇದರಿಂದ ಮಕ್ಕಳು ದೊಡ್ಡವರಾದ ಮೇಲೂ ಎಲ್ಲರ ಜೊತೆ ಅಷ್ಟಾಗಿ ಬೆರೆಯದೆ ಸಮಾಧಾನ, ಸಂತೋಷದಿಂದ ನಲಿಯುವ ಭಾಗ್ಯದಿಂದ ವಂಚಿತರಾಗುತ್ತಿದ್ದಾರೆ.
ಈಗಿನ ಶಾಲಾ ರಜೆ ಹಾಗೂ ಶಿಕ್ಷಣ ಪದ್ಧತಿಯು ಮಕ್ಕಳಲ್ಲಿ ವಿಶಾಲ ಮನೋಭಾವ ಬೆಳೆಯಲು ಅನುವು ಮಾಡಿಕೊಡದೆ ಅವರಲ್ಲಿ ಸಂಕುಚಿತ ಭಾವ ತುಂಬುತ್ತಿದೆ. ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು. ಜೊತೆಗೆ ಕೌಟುಂಬಿಕ ಮೌಲ್ಯಗಳನ್ನೂ ಅವರಲ್ಲಿ ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಶಿಕ್ಷಣ ಇಲಾಖೆಗೆ ಇರಬೇಕು. ಹಿಂದಿನಂತೆಯೇ ಒಂದು ತಿಂಗಳು ದಸರಾ ರಜೆಯನ್ನು ನೀಡುವುದು ಇದಕ್ಕೆ ಪೂರಕವಾದ ಕ್ರಮವಾಗುತ್ತದೆ.
-ಎಂ.ಪರಮೇಶ್ವರ,ಮದ್ದಿಹಳ್ಳಿ, ಹಿರಿಯೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.