ಒಂದಾನೊಂದು ಕಾಲದಲ್ಲಿ ದೊರೆಗಳು ಮಾರುವೇಷದಲ್ಲಿ ನಾಡಿನಲ್ಲೆಡೆ ಸುತ್ತಾಡಿ ಜನರ ಕಷ್ಟ-ಸುಖವನ್ನು ತಿಳಿದುಕೊಂಡು ಜನರ ಬದುಕಿಗೆ ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದರಂತೆ ಎಂದು ಕತೆಗಳಲ್ಲಿ ಕೇಳುತ್ತಿದ್ದೆವು. ಈಗ ದೊರೆಗಳು ಇಲ್ಲ ‘ಜನತಂತ್ರ’ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಿದ್ದಾರೆ. ಇವರು ದೆಹಲಿಯಿಂದ ರಾಜ್ಯಕ್ಕೆ ಬಂದಾಗ ಮಾತ್ರ ಅವರು ಸಾಗುವ ರಸ್ತೆಗಳು ಗುಂಡಿಮುಕ್ತವಾಗಿರಬೇಕು, ಚೆಲ್ಲಾಡಿದ ತ್ಯಾಜ್ಯ ಅವರ ಕಣ್ಣಿಗೆ ಬೀಳದಂತೆ ನೋಡಿಕೊಳ್ಳಬೇಕು ಎನ್ನುವುದು ರಾಜ್ಯದ ಆಡಳಿತಯಂತ್ರದ ಕರ್ತವ್ಯ ಎಂಬಂತಾಗಿದೆ.
ಪ್ರಧಾನಿಯವರ ರಾಜ್ಯ ಭೇಟಿಯಿಂದ ಬೆಂಗಳೂರು ಮತ್ತು ಮೈಸೂರಿನಲ್ಲಿ ಕೆಲವು ರಸ್ತೆಗಳಿಗೆ ಡಾಂಬರು ಹಾಕಿ, ಸ್ವಚ್ಛಗೊಳಿಸಿ ಮಿಂಚಿನಂತೆ ಹೊಳೆಯುವ ಹಾಗೆ ಮಾಡಿದ್ದನ್ನು ನೋಡಿದ ಕೆಲವರಿಗೆ ಖುಷಿಯೋ- ಖುಷಿ. ಏಕೆಂದರೆ, ಪ್ರಧಾನಿಯವರು ಆಗಾಗ್ಗೆ ರಾಜ್ಯಕ್ಕೆ ಬಂದರೆ ರಸ್ತೆಗಳು ಗುಂಡಿಮುಕ್ತವಾಗಿರುತ್ತವೆ ಎಂದು. ನಿಜವೆಂದರೆ, ಪ್ರಧಾನಿಯವರೂ ಒಮ್ಮೆ ರಾಜ್ಯವೊಂದರಲ್ಲಿ ಶಾಸಕ, ಮಂತ್ರಿ, ಮುಖ್ಯಮಂತ್ರಿ ಸ್ಥಾನದಲ್ಲಿದ್ದವರೇ ಅಲ್ಲವೆ? ಅವರಿಗೆ ತಾತ್ಕಾಲಿಕವಾಗಿ ಚುರುಕಾಗುವ ಆಡಳಿತಯಂತ್ರದ ಬಗ್ಗೆ ತಿಳಿಯದ ವಿಚಾರವೇನಲ್ಲ? ಪ್ರಧಾನಿಯವರು ಆಗಾಗ್ಗೆ ರಾಜ್ಯಕ್ಕೆ ಬರಲಿ. ಆದರೆ, ಅವರು ಬರುವಾಗ ‘ಟ್ವೀಟ್ ಮಾಡದೇ’ ಮಾರುವೇಷದಲ್ಲಿ (ಭದ್ರತೆಯನ್ನು ಕಡೆಗಣಿಸದಂತೆ) ರಾಜ್ಯಕ್ಕೆ ಆಗಾಗ್ಗೆ ಬಂದು ಹೋದರೆ ಅವರಿಗೆ ಇಲ್ಲಿನ ರಸ್ತೆಗಳ ನಿಜ ಸ್ಥಿತಿ ತಿಳಿಯುತ್ತದೆ. ಆಗ ರಾಜ್ಯದ ಆಡಳಿತ ಸದಾ ಚುರುಕಾಗಿರುತ್ತದೆ ಅಲ್ಲವೇ?
- ಡಾ. ಜಿ.ಬೈರೇಗೌಡ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.