ದಕ್ಷಿಣ ಕರ್ನಾಟಕದ ಹೆಸರಾಂತ ದೇಗುಲವೊಂದಕ್ಕೆ ಇತ್ತೀಚೆಗೆ ಹೋಗಿದ್ದಾಗ ಆದ ಅನುಭವವು ಹೆಣ್ಣು ಮಕ್ಕಳು ದೇವಾಲಯವನ್ನು ಪ್ರವೇಶಿಸಲು ಕೇರಳ, ಮಹಾರಾಷ್ಟ್ರದಲ್ಲಿ ಮಾಡಿದಂತಹ ಉಗ್ರ ಹೋರಾಟವನ್ನು ನೆನಪಿಸಿತು.
ದೇವಾಲಯದಲ್ಲಿ ಅನ್ನದಾನ ಸೇವಾ ರಸೀದಿಯನ್ನು ಮಾಡಿಸಿದಾಗ ಕುಟುಂಬದವರ ಹೆಸರಲ್ಲಿ ಪೂಜೆ ಮಾಡಿಕೊಡಲಾಗುತ್ತದೆ. ಪತಿ- ಪತ್ನಿ ಹಾಗೂ ಮಗುವಿನ ಜೊತೆಗೆ ಪತಿಯ ತಂದೆ– ತಾಯಿ ಹೆಸರಿನಲ್ಲಿ ಕೂಡ ಪೂಜಾ ಸಂಕಲ್ಪವನ್ನು ಮಾಡಲಾಯಿತು. ಅಂತೆಯೇ, ನನ್ನ ಪತಿ ನನ್ನ ತಂದೆ ತಾಯಿಯ ಹೆಸರು ಹೇಳಿದಾಗ, ‘ಅವರ ಹೆಸರಲ್ಲಿ ಪೂಜೆ ಮಾಡಲು ಬರುವುದಿಲ್ಲ, ನಿಮ್ಮ ತಂದೆ ತಾಯಿ ಮಾತ್ರ ನಿಮ್ಮ ಕುಟುಂಬದವರಾಗುತ್ತಾರೆ. ಹಾಗೇನಾದರೂ ಅವರ ಹೆಸರಿನಲ್ಲಿ ಪೂಜೆ ಮಾಡಬೇಕಾದರೆ 250 ರೂಪಾಯಿಯ ಬೇರೊಂದು ರಸೀದಿ ಮಾಡಿಸಿ’ ಎಂದರು.
ಇಲ್ಲಿ ನಾನು ಚಿಂತಿಸುವಂತೆ ಮಾಡಿದ್ದು, ಪತಿಯ ತಂದೆ-ತಾಯಿ ನನ್ನ ಕುಟುಂಬಕ್ಕೆ ಸೇರುವುದಾದರೆ, ನನ್ನ ತಂದೆ-ತಾಯಿ ಏಕೆ ಸೇರುವುದಿಲ್ಲ ಎಂಬ ಪ್ರಶ್ನೆ. ಪೂಜೆ ಮಾಡುವವರನ್ನು ಹೀಗೆ ಪ್ರಶ್ನಿಸಿದಾಗ, ನಮ್ಮಲ್ಲಿನ ವ್ಯವಸ್ಥೆ ಇರುವುದೇ ಹೀಗೆ ಎಂಬ ಉತ್ತರ ಬಂತು.
ಪ್ರತಿಯೊಬ್ಬ ತಂದೆ– ತಾಯಿ ತಮ್ಮ ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಾರೆ. ಮಗಳು ಗರ್ಭಿಣಿಯಾದಾಗ, ಬಾಣಂತನ, ಮಗುವಿನ ಲಾಲನೆ ಪಾಲನೆಯ ಜವಾಬ್ದಾರಿ ಎಲ್ಲವನ್ನೂ ಹೆಣ್ಣಿನ ತಂದೆ-ತಾಯಿ ನಿರ್ವಹಿಸುವ ಪದ್ಧತಿ ಸಮಾಜದಲ್ಲಿದೆ. ಆದರೆ ಅವರು ಮಾತ್ರ ಮಗಳ ಕುಟುಂಬಕ್ಕೆ ಸೇರಿದವರಲ್ಲ ಎಂದರೆ, ಎಂತಹ ಸಮಾಜ ಮತ್ತು ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ? ಇದೊಂದು ನೋವಿನ ಹಾಗೂ ಆಘಾತಕಾರಿ ಸಂಗತಿಯಾಗಿದೆ. ವ್ಯವಸ್ಥೆಯ ಹೆಸರಿನಲ್ಲಿ ಇಂತಹ ತಾರತಮ್ಯವನ್ನು ಎಸಗುತ್ತಿರುವ ಮೂಢರಿಗೆ ಜ್ಞಾನದ ಅರಿವು ಮೂಡಲಿ.
–ಸುಷ್ಮಾ ಬಿ.ಎಸ್., ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.