ADVERTISEMENT

ಶಿಕ್ಷಕನ ಮಾದರಿ ನಡೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 19:30 IST
Last Updated 21 ಡಿಸೆಂಬರ್ 2021, 19:30 IST

ವಿಜಯಪುರ ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕರಾದ ಪರಮೇಶ್ವರ ಎಸ್. ಗದ್ಯಾಳ ಸ್ವಂತ ದುಡಿಮೆಯ ಒಂದು ಲಕ್ಷ ರೂಪಾಯಿಯನ್ನು ಮಕ್ಕಳ ನೈಜ ಕಲಿಕೆಗೆ ಅಗತ್ಯವಾದ ಶಾಲಾ ಕೊಠಡಿಯ ಗೋಡೆಗಳ ಮೇಲಿನ ಕಲಿಕಾ ಬರವಣಿಗೆ, ತಾಲ್ಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ನಕ್ಷೆ ಮತ್ತು ಇತರ ಮಾಹಿತಿಗಳನ್ನು ಚಿತ್ರಿಸಲು ವ್ಯಯಿಸಿರುವುದಾಗಿ ವರದಿಯಾಗಿದೆ (ಪ್ರ.ವಾ., ಡಿ. 21). ಪೋಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಇಲಾಖೆಯ ಮೆಚ್ಚುಗೆಗೆ ಪಾತ್ರವಾಗಿರುವ ಇವರ ನಡೆ, ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ವಾಣಿಗೆ ಪೂರಕವಾಗಿದೆ. ಕೋಟ್ಯಂತರ ರೂಪಾಯಿಯ ಒಡೆಯರಾಗಿದ್ದರೂ ಎಂಜಲು ಕೈಯ್ಯಲ್ಲಿ ಕಾಗೆಯನ್ನೂ ಓಡಿಸದ ಅನೇಕರು ಇದ್ದಾರೆ. ಎಷ್ಟೇ ಸಂಬಳ ಬಂದರೂ ಇನ್ನೂ ಸಾಲದು ಎಂದು ಗೊಣಗುವವರಿದ್ದಾರೆ. ಆದರೆ, ಪರಮೇಶ್ವರ ಅವರು ಇಂತಹವರಿಗೆಲ್ಲ ಮಾದರಿ ಎಂದರೆ ಅತಿಶಯೋಕ್ತಿ ಅಲ್ಲ. ಎಲ್ಲರೂ ತಮ್ಮ ದುಡಿಮೆಯ ಒಂದು ಪಾಲನ್ನು ಸಮಾಜದ ಅಭಿವೃದ್ದಿಗೆ ವಿನಿಯೋಗಿಸುವಂತಾದರೆ ಸಮಾಜ ಸುಧಾರಿಸುವುದರಲ್ಲಿ ಸಂದೇಹವೇ ಇಲ್ಲ.

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT