‘ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ’ ಎಂಬ ಅಭಿಯಾನ ಸರ್ಕಾರದಿಂದ ಆರಂಭವಾಗಿರುವುದು ಔಚಿತ್ಯಪೂರ್ಣ. ಈ ಬಾರಿಯ ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳು ಹೆಚ್ಚು ಪ್ರಗತಿ ಸಾಧಿಸಿರುವುದು ಈ ಅಭಿಯಾನದ ಮಹತ್ವವನ್ನು ಶ್ರುತಪಡಿಸುತ್ತದೆ. ಹೆಚ್ಚಿನ ಶುಲ್ಕ ನೀಡಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದರೆ ಅವರು ಇಂಗ್ಲಿಷ್ ಮಾಧ್ಯಮದಲ್ಲಿ ಓದಿ ಹೆಚ್ಚು ಬುದ್ಧಿವಂತರಾಗಿ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ ಎಂಬ ದೊಡ್ಡ ಭ್ರಮೆಯಲ್ಲಿ ನಾವೆಲ್ಲ ಇದ್ದೇವೆ. ಈ ಭ್ರಮೆಯಿಂದ ಹೊರಬರದಿದ್ದರೆ ನಮ್ಮ ಮಕ್ಕಳ ಭವಿಷ್ಯ ಕತ್ತಲಲ್ಲಿ ಕಳೆದುಹೋಗುವ ಸಂಭವವಿದೆ. ಮಕ್ಕಳ ಶಿಕ್ಷಣ ಮಾಧ್ಯಮ ಮಾತೃಭಾಷೆ/ಪರಿಸರದ ಭಾಷೆ ಆಗಿರಬೇಕೆಂಬುದು ಜಗತ್ತಿನ ಎಲ್ಲ ಶಿಕ್ಷಣ ತಜ್ಞರು, ಭಾಷಾ ವಿಜ್ಞಾನಿಗಳು, ಮನೋವಿಜ್ಞಾನಿಗಳ ಅಭಿಮತ.
ಮಗು ತನ್ನ ಮಾತೃಭಾಷೆ/ಪರಿಸರದ ಭಾಷೆಯನ್ನು ಮೊದಲು ಸರಿಯಾಗಿ ಕಲಿತರೆ, ವಿಷಯ ಗ್ರಹಿಕೆ ಸುಲಭ ಸಾಧ್ಯವಾಗುತ್ತದೆ ಮತ್ತು ಅನ್ಯಭಾಷೆಗಳನ್ನು ಕಲಿಯಲು ಪೂರಕವಾಗುತ್ತದೆ. ಇದೇ ಶಿಕ್ಷಣದ ಅರ್ಥಪೂರ್ಣ ಅಡಿಪಾಯ. ಹಾಗಾಗಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಸರ್ಕಾರದ ಅಭಿಯಾನಕ್ಕೆ ಪೋಷಕರು ಪೂರಕವಾಗಿ ಸ್ಪಂದಿಸುವುದು ಎಲ್ಲ ದೃಷ್ಟಿಯಿಂದಲೂ ಸರಿಯಾದ ನಿಲುವಾಗಿರುತ್ತದೆ.
-ಪ್ರೊ. ಸಿ.ಪಿ.ಸಿದ್ಧಾಶ್ರಮ,ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.