ಇಂಡೊನೇಷ್ಯಾದಲ್ಲಿ ನಡೆದ ಚುನಾವಣೆಯಲ್ಲಿ ಅವಿರತವಾಗಿ ಮತಪತ್ರಗಳ ಎಣಿಕೆಯಿಂದ ಬಳಲಿ 272 ಮಂದಿ ಚುನಾವಣಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ (ಪ್ರ.ವಾ., ಏ.29). ಇದುಅಲ್ಲಿನ ಚುನಾವಣಾ ಆಯೋಗದ ನಿರ್ವಹಣಾ ವೈಫಲ್ಯವೇ ಸರಿ.ಎಣಿಕೆ ಪ್ರಕ್ರಿಯೆಗೆ ನಿಯಮಗಳು ಇರುತ್ತವೆ. ಅಲ್ಲದೆ ನಿರಂತರವಾಗಿ 8 ತಾಸಿಗಿಂತ ಹೆಚ್ಚು ಕೆಲಸ ಮಾಡುವಂತಿಲ್ಲ. ಈ ಮಧ್ಯೆ ಊಟ, ವಿಶ್ರಾಂತಿಗೂ ಅವಕಾಶ ಇರುತ್ತದೆ. ಇಲ್ಲಿ ಇವೆಲ್ಲವನ್ನೂ ಗಾಳಿಗೆ ತೂರಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಲ್ಲವೇ?
ಭಾರತದಲ್ಲಿ ಚುನಾವಣಾ ಆಯೋಗವು ಚುನಾವಣಾ ಸಿಬ್ಬಂದಿಗೆ ತೊಂದರೆಯಾಗದಂತೆ, ಸೂಕ್ತ ತರಬೇತಿ ನೀಡಿ ಸುಗಮವಾಗಿ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ. ಚುನಾವಣೆ ವೇಳೆ ಸಿಬ್ಬಂದಿಯ ಯೋಗಕ್ಷೇಮಕ್ಕಾಗಿ ವೈದ್ಯರ ತಂಡವೊಂದನ್ನು ರಚಿಸಲಾಗಿರುತ್ತದೆ. ಕರ್ತವ್ಯದ ಸಮಯದಲ್ಲಿ ಆರೋಗ್ಯದಲ್ಲಿ ಏರುಪೇರಾದರೆ ಪ್ರಥಮ ಚಿಕಿತ್ಸೆಯ ಕಿಟ್ ಕೊಟ್ಟಿರುತ್ತಾರೆ. ಸಿಬ್ಬಂದಿಯ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ‘ಡಿ’ ದರ್ಜೆ ನೌಕರರನ್ನು ನೇಮಿಸಿರುತ್ತಾರೆ. ಹೀಗಾಗಿ ನಮ್ಮ ದೇಶದ ಚುನಾವಣಾ ವ್ಯವಸ್ಥೆ ಜಗತ್ತಿಗೇ ಮಾದರಿ. ಇಂಡೊನೇಷ್ಯಾದಲ್ಲಿ ಮತಪತ್ರಗಳ ಎಣಿಕೆ ಸಮಯದಲ್ಲಿ ಸಿಬ್ಬಂದಿಯ ಬಳಲಿಕೆ ಅಲ್ಲಿನ ಮೇಲಧಿಕಾರಿಗಳ ಗಮನಕ್ಕೆ ಬರಲೇ ಇಲ್ಲವೆ ಅಥವಾ ಅವರು ಜಾಣಕುರುಡಾಗಿ ವರ್ತಿಸಿದರೇ?
ತಂತ್ರಜ್ಞಾನದ ಯುಗದಲ್ಲಿದ್ದೂ, ಮಾನವ ಶ್ರಮ ಬೇಡುವ ಮತಪತ್ರಗಳ ಎಣಿಕೆ ಓಬೀರಾಯನ ಕಾಲದ್ದು. ಇನ್ನಾದರೂ ಅಲ್ಲಿನ ವ್ಯವಸ್ಥೆ ಬದಲಾಗಲಿ. ಮಾನವ ಶ್ರಮ ಉಳಿತಾಯದ ನಿಟ್ಟಿನಲ್ಲಿ ಅಲ್ಲಿನ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿ. ಸಾವನ್ನಪ್ಪಿದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.