ರಾಜ್ಯ ಸರ್ಕಾರವು ಆಯ್ದ ಕೆಲವು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಿರುವುದನ್ನು ಸ್ವಾಗತಾರ್ಹ ಬದಲಾವಣೆ ಎಂದು ನಟರಾಜ ಬೂದಾಳು ವರ್ಣಿಸಿದ್ದಾರೆ (ಪ್ರ.ವಾ., ಜುಲೈ 2).
ಈ ಶಾಲೆಗಳಿಗೆ ಪೋಷಕರು ಮುಗಿಬೀಳುತ್ತಿದ್ದಾರೆಂದೂ, ಅಂತಹವರ ಮಕ್ಕಳೆಲ್ಲರಿಗೂ ಪ್ರವೇಶ ಕಲ್ಪಿಸುವುದು ಸರ್ಕಾರದ ಸಾಂವಿಧಾನಿಕ ಹೊಣೆಯೆಂದೂ ಹೇಳಿದ್ದಾರೆ. ಇದಕ್ಕೆ ಇವರು ನೀಡುವ ಕಾರಣ, ಪೋಷಕರು ತಮ್ಮ ಮಕ್ಕಳಿಗೆ ಆತ್ಮವಿಶ್ವಾಸ ಮತ್ತು ಉತ್ತಮ ಅವಕಾಶಗಳನ್ನು ಒದಗಿಸುವ ಗುಣಮಟ್ಟದ ಶಿಕ್ಷಣವನ್ನು ಈ ಶಾಲೆಗಳು ಒದಗಿಸಬಲ್ಲವು ಎಂದು ನಿರೀಕ್ಷಿಸಿದ್ದಾರೆ ಎಂಬುದಾಗಿದೆ. ಆದರೆ ಕನ್ನಡ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗದೆ ಈ ಶಾಲೆಗಳು ಮುಚ್ಚಲ್ಪಟ್ಟವು ಎಂದು ಪರೋಕ್ಷವಾಗಿ ಸೂಚಿಸುವ ಲೇಖಕರು, ಅದೇ ಶಾಲೆಗಳು ಇಂಗ್ಲಿಷ್ ಮಾಧ್ಯಮದ ಶಾಲೆಗಳ ಮೂಲಕ ಗುಣಮಟ್ಟದ ಶಿಕ್ಷಣವನ್ನು ಹೇಗೆ ಒದಗಿಸಬಲ್ಲವೆಂದು ಪೋಷಕರು ನಿರೀಕ್ಷಿಸುತ್ತಾರೆ ಎಂಬುದನ್ನು ಹೇಳುವುದಿಲ್ಲ. ಹೇಳಲು ಹೊರಟರೆ, ಇಂಗ್ಲಿಷ್ ಮಾಧ್ಯಮದ ಮೂಲಕ ಗುಣಮಟ್ಟದ ಶಿಕ್ಷಣ ದೊರಕಬಲ್ಲದು ಎಂಬ ಅಬದ್ಧವನ್ನು ಹೇಳಬೇಕಾಗುತ್ತದೆ. ಇದರ ಬದಲಾಗಿ ಗುಣಮಟ್ಟದ ಮಾತಾಡದೆ ನೇರವಾಗಿ ಇಂಗ್ಲಿಷ್ ಮಾಧ್ಯಮ ಮಾತ್ರ ಅವಕಾಶ ಮತ್ತು ಆತ್ಮವಿಶ್ವಾಸಗಳನ್ನು ಖಚಿತಪಡಿಸಬಲ್ಲದು ಎಂದು ಹೇಳಲಿ. ಆಗ ಕನ್ನಡ ಮಾಧ್ಯಮದಲ್ಲೇ ಓದಿ, ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ನಮ್ಮ ಸಮಕಾಲೀನರಿಗಿಂತ ಹೆಚ್ಚಲ್ಲದಿದ್ದರೂ ಜೀವನದಲ್ಲಿ ಅವರಷ್ಟೇ ಯಶಸ್ಸು ಮತ್ತು ಸಾರ್ಥಕತೆಗಳನ್ನು ಕಂಡ ನಮ್ಮಂಥವರು ಅವರ ಈ ಮಾತನ್ನು ಒಂದು ಅಭಿಪ್ರಾಯವೆಂದು ಮಾನ್ಯ ಮಾಡೋಣ.
ಆದರೆ ಇಂದು ಇಂಗ್ಲಿಷ್ ಮಾಧ್ಯಮವೇ ಆತ್ಮವಿಶ್ವಾಸ ಮತ್ತು ಅವಕಾಶಗಳಿಗೆ ಕಾರಣವಾಗುತ್ತದೆ ಎಂಬ ಇವರ ಈ ಅಭಿಪ್ರಾಯವನ್ನು ಒಪ್ಪುವುದಾದರೆ, ನಮ್ಮ ಮಕ್ಕಳನ್ನು ಶಾಲೆಗಳಲ್ಲಾದರೂ ಅವರವರ ತಾಯಿ ಭಾಷೆಯಿಂದ ದೂರವಿರಿಸಿ, ಸಂಪೂರ್ಣ ಇಂಗ್ಲಿಷ್ ಭಾಷೆಯ ವಾತಾವರಣದಲ್ಲಿ ಬೆಳೆಸುವ ಮೂಲಕ ಅವರನ್ನು ಇನ್ನಷ್ಟು ಆತ್ಮವಿಶ್ವಾಸ ಮತ್ತು ಅವಕಾಶಗಳ ಲೋಕಕ್ಕೆ ಒಯ್ಯಬಹುದು. ಒಂದು ಭಾಷೆಯಾಗಿ ಕೂಡ ತಾಯಿ ಭಾಷೆಯನ್ನು ಬಿಟ್ಟು ಸಂಸ್ಕೃತ ಮತ್ತು ಹಿಂದಿಯನ್ನು ಕಲಿಸುವ ಮೂಲಕ ಅವರನ್ನು ಪ್ರತಿಷ್ಠಿತ ಮತ್ತು ರಾಷ್ಟ್ರೀಯ ಮಟ್ಟದ ಪ್ರಜೆಗಳನ್ನಾಗಿ ರೂಪಿಸಬಹುದು. ಆಗ ಅವರು ಇನ್ನಷ್ಟು ಆತ್ಮವಿಶ್ವಾಸದಿಂದ ಹೆಚ್ಚಿನ ಅವಕಾಶಗಳಿಗೆ ತೆರೆದುಕೊಳ್ಳಬಲ್ಲರು. ತಾಯಿ ಭಾಷೆಯನ್ನು ಅನಿವಾರ್ಯವಾದರೆ ಮಾತ್ರ ಮನೆಯ ಭಾಷೆಯಾಗಿ ಉಳಿಸಿಕೊಳ್ಳಬಹುದು. ಲೇಖಕರ ಆಲೋಚನಾ ಕ್ರಮದ ಮುಂದಿನ ಹಂತ ಇದಾಗಿದ್ದರೆ ಆಶ್ಚರ್ಯವಿಲ್ಲ. ಮಾತೃಭಾಷಾ ಶಿಕ್ಷಣವು ಆತ್ಮವಿಶ್ವಾಸ ಕುಗ್ಗಿಸುತ್ತದೆ ಎಂದು ಭಾವಿಸುವ ಮನಸ್ಸು ಎಂತಹ ಸಮಾಜದ ಎಂತಹ ಅವಕಾಶಗಳ ಹುಡುಕಾಟದಲ್ಲಿರುತ್ತದೆ ಎಂಬುದನ್ನು ಸುಲಭವಾಗಿ ಊಹಿಸಬಹುದು. ಶಿಕ್ಷಣವನ್ನು ಪೂರ್ಣವಾಗಿ ವ್ಯವಹಾರ ಮಾಡುವ ಮನಃಸ್ಥಿತಿ ಇದು. ಕಳೆದ ಕೆಲವು ವರ್ಷ ಗಳಲ್ಲಿ ಜೀವನದ ಎಲ್ಲ ವೈಫಲ್ಯಗಳಿಗೂ ಕನ್ನಡವೇ ಕಾರಣ ವೆಂದು ಗೋಳಾಡುವ ಚಾಳಿಯನ್ನು ಕೆಲವರು ಒಂದು ಆಂದೋಲನದಂತೆ ಬೆಳೆಸುತ್ತಿದ್ದಾರೆ. ಈ ಲೇಖನ ಇಂತಹ ಆಂದೋಲನದ ಮುಂದುವರಿದ ಭಾಗವಷ್ಟೇ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.