ದಕ್ಷಿಣ ಭಾರತದ ಮೊತ್ತಮೊದಲ ಆಯುಷ್ ವಿಶ್ವವಿದ್ಯಾಲಯವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಸ್ಥಾಪಿಸುವ ಮಸೂದೆಗೆ ಇತ್ತೀಚೆಗೆ ವಿಧಾನಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಆದರೆ, ನಮ್ಮ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಶಿವಮೊಗ್ಗ ಜಿಲ್ಲೆ ಬಿಟ್ಟು ಬೇರೆ ಹಿಂದುಳಿದ ಜಿಲ್ಲೆಗಳು ಕಾಣಿಸುವುದಿಲ್ಲವೇ? ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಕುವೆಂಪು ವಿಶ್ವವಿದ್ಯಾಲಯ, ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸುತ್ತಿವೆ. ಆದರೂ ಮತ್ತದೇ ಶಿವಮೊಗ್ಗ ಜಿಲ್ಲೆಯಲ್ಲೇ ಆಯುಷ್ ವಿಶ್ವವಿದ್ಯಾಲಯ ಆರಂಭಿಸಲು ಮುಂದಾದದ್ದು ಏಕೆ?
ರಾಜ್ಯದಲ್ಲಿ ಈವರೆಗೆ ಒಂದೇ ಒಂದು ವಿಶ್ವವಿದ್ಯಾಲಯವೂ ಇಲ್ಲದ ಅನೇಕ ಜಿಲ್ಲೆಗಳಿವೆ. ಸರ್ಕಾರ ಅಂತಹ ಜಿಲ್ಲೆಗಳನ್ನು ಗುರುತಿಸಿ ಅಲ್ಲಿನ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ. ಅದು ಬಿಟ್ಟು ವಿಶ್ವವಿದ್ಯಾಲಯಗಳು ಇರುವ ಜಿಲ್ಲೆಗಳಿಗೇ ಹೆಚ್ಚುವರಿ ವಿಶ್ವವಿದ್ಯಾಲಯಗಳನ್ನು ಮಂಜೂರು ಮಾಡುತ್ತಾ ಹೋದರೆ ಉಳಿದ ಜಿಲ್ಲೆಗಳ ಕಥೆಯೇನು?
ಸರ್ಕಾರದಿಂದಲೇ ಏಕೆ ಈ ಮಲತಾಯಿ ಧೋರಣೆ? ಈ ಪ್ರಕ್ರಿಯೆ ಭವಿಷ್ಯದಲ್ಲಿ ಹೀಗೆಯೇ ಮುಂದುವರಿದರೆ, ಅಭಿವೃದ್ಧಿಯಾಗಿರುವ ಜಿಲ್ಲೆಗಳು ಅಭಿವೃದ್ಧಿಯಾಗುತ್ತಲೇ ಹೋಗುತ್ತವೆ, ಹಿಂದುಳಿದಿರುವ ಜಿಲ್ಲೆಗಳು ಇನ್ನೂ ಹಿಂದುಳಿಯುವುದರಲ್ಲಿ ಅನುಮಾನವೇ ಇಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದೇ ಕಷ್ಟವಾಗುತ್ತದೆ. ಈಗಲೂ ಕಾಲ ಮಿಂಚಿಲ್ಲ, ಶಿವಮೊಗ್ಗ ಜಿಲ್ಲೆಗೆ ಮಂಜೂರಾಗಿರುವ ಆಯುಷ್ ವಿಶ್ವವಿದ್ಯಾಲಯವನ್ನು ಯಾವ ವಿಶ್ವವಿದ್ಯಾಲಯವೂ ಇಲ್ಲದ ಜಿಲ್ಲೆಗೆ ಬಿಟ್ಟುಕೊಟ್ಟು ಔದಾರ್ಯ ಮೆರೆಯಬೇಕಾಗಿದೆ.
-ಮುರುಗೇಶ ಡಿ, ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.