ADVERTISEMENT

ನೈಟ್‌ ಲ್ಯಾಂಡಿಂಗ್‌: ಕಾಯುತ್ತಿದ್ದಾರೆ ಸ್ಥಳೀಯರು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 19:31 IST
Last Updated 10 ಮಾರ್ಚ್ 2021, 19:31 IST

ಕಲಬುರ್ಗಿ ವಿಮಾನ ನಿಲ್ದಾಣವು ದೇಶದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನ ನಿಲ್ದಾಣ ಎಂದು ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಗುರುತಿಸಿದೆ. ಇಲ್ಲಿಂದ ಬೆಂಗಳೂರಿಗೆ ಪ್ರತಿದಿನ ಎರಡು ವಿಮಾನಗಳ ಸೇವೆ ಇದ್ದರೂ ಬೆಳಗಿನ ಸಮಯದಲ್ಲಿರದ ಕಾರಣ ಅನನುಕೂಲವಾಗುತ್ತಿದೆ. ಮಂಗಳವಾರ ಹೊರತುಪಡಿಸಿದರೆ ವಾರದ ಮಿಕ್ಕೆಲ್ಲ ದಿನಗಳಲ್ಲಿ ಎರಡೂ ವಿಮಾನಗಳ ಸೇವೆ ಅಪರಾಹ್ನ ಮಾತ್ರ ಲಭ್ಯ. ಬೆಂಗಳೂರಿಗೆ ಇಲ್ಲಿಂದ ಬೆಳಿಗ್ಗೆ 7ಕ್ಕೆ ಹೊರಟು ನಂತರ ಕೆಲಸ ಮುಗಿಸಿಕೊಂಡು ಅಲ್ಲಿಂದ ರಾತ್ರಿ 8 ಅಥವಾ 9ಕ್ಕೆ ವಿಮಾನ ಸೇವೆ ಲಭಿಸಿದರೆ, ಅಂದೇ ಹೊರಟು ಮರಳಿ ಕಲಬುರ್ಗಿ ಸೇರಿ, ಅಲ್ಲಿ ತಂಗುವ ವೆಚ್ಚವನ್ನು ಉಳಿಸಬಹುದು ಎಂಬ ಮಾತಿಗೆ ತೂಕವಿದೆ.

ಕಲಬುರ್ಗಿ ವಿಮಾನ ನಿಲ್ದಾಣದ ನೈಟ್ ಲ್ಯಾಂಡಿಂಗ್ ವ್ಯವಸ್ಥೆಯ ಕಾಮಗಾರಿ 2020ರ ಡಿಸೆಂಬರ್‌ನಲ್ಲಿ ಮುಗಿಯುತ್ತದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವರು ಸಂಸತ್ತಿನಲ್ಲಿ ಲಿಖಿತ ಉತ್ತರ ಕೊಟ್ಟಿದ್ದರು. ಆದರೆ, ಕಾಮಗಾರಿ ಮುಗಿದರೂ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದಿಂದ (ಡಿಜಿಸಿಎ) ಈ ಸಂಬಂಧದ ಅನುಮತಿ ಇನ್ನೂ ಲಭಿಸಿಲ್ಲ ಎಂದು ಹೇಳಲಾಗುತ್ತಿದೆ. ಆದಷ್ಟು ಬೇಗ ಅನುಮತಿ ದೊರೆತಲ್ಲಿ ದೇಶದ ಪ್ರಮುಖ ವಾಯುಯಾನ ಸೇವಾ ಸಂಸ್ಥೆಗಳು ದೇಶದ ಪ್ರಮುಖ ನಗರಗಳಿಗೆ ವಾಯುಯಾನ ಸೇವೆ ಒದಗಿಸಲು ಉತ್ಸುಕವಾಗಿವೆ ಎಂದು ತಿಳಿದುಬಂದಿದೆ. ಈ ವ್ಯವಸ್ಥೆ ಶೀಘ್ರ ಕಾರ್ಯೋನ್ಮುಖವಾಗಲಿ ಎಂದು ಸ್ಥಳೀಯರು ಆಸೆ ತುಂಬಿದ ಕಂಗಳಿಂದ ಕಾದಿದ್ದೇವೆ.

-ವೆಂಕಟೇಶ್ ಮುದಗಲ್, ಕಲಬುರ್ಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT