ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳು ಕಳೆದರೂ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿನ ಒಳಜಗಳ ನಿಂತಿಲ್ಲ. ಇದು ರಾಜ್ಯದ ಅಭಿವೃದ್ಧಿ ಮೇಲೆ ದುಷ್ಪರಿಣಾಮಬೀರುತ್ತಿದೆ.
ಚುನಾವಣೆ ಸಮಯದಲ್ಲಿ ಈ ಪಕ್ಷಗಳು ಮತದಾರರಿಗೆ ಪ್ರಣಾಳಿಕೆಯ ಮೂಲಕ ಸಾಕಷ್ಟು ಭರವಸೆಗಳನ್ನು ನೀಡಿದ್ದವು. ಆದರೆ, ಸರ್ಕಾರ ರಚನೆಯಾದಾಗಿನಿಂದ ಇಲ್ಲಿಯವರೆಗೂ ರಾಜಕಾರಣಿಗಳು ಸ್ವಹಿತ ರಕ್ಷಣೆಗೆ ಹೋರಾಡುತ್ತಿದ್ದಾರೆಯೇ ಹೊರತು ರಾಜ್ಯದ ಅಭಿವೃದ್ಧಿಗಾಗಿ ಅಲ್ಲ. ಈಗಿನ ಸರ್ಕಾರ ಹಣ ಬಿಡುಗಡೆ ಮಾಡದಿರುವುದರಿಂದ, ಹಿಂದಿನ ಸರ್ಕಾರ ಘೋಷಿಸಿದ್ದಂತಹ ಯೋಜನೆಗಳ ಕಾಮಗಾರಿಗಳು ಅರ್ಧಕ್ಕೇ ನಿಂತಿವೆ. ಈ ನಡುವೆ, ಎಲಿವೇಟೆಡ್ ಕಾರಿಡಾರ್ ಮತ್ತು ಉಕ್ಕಿನ ಸೇತುವೆಯಂತಹ ಭಾರಿ ವೆಚ್ಚದ ಹೊಸ ಯೋಜನೆಗಳ ಬಗ್ಗೆ ಸರ್ಕಾರ ಮಾತಾಡುತ್ತಿರುವುದು ಸೋಜಿಗದ ಸಂಗತಿ.
ಬರದಿಂದಾಗಿ ರೈತರು ಕಂಗಾಲಾಗಿದ್ದಾರೆ. ಎತ್ತಿನಹೊಳೆಯಂತಹ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಕೆರೆ, ಕಾಲುವೆಗಳನ್ನು ತುಂಬಿಸಬೇಕಾಗಿದೆ. ಮೊದಲು ಹಳೆಯ ಯೋಜನೆಗಳನ್ನು ಪೂರ್ಣಗೊಳಿಸಿ, ನಂತರ ಹೊಸ ಯೋಜನೆಗಳ ಬಗ್ಗೆ ಸರ್ಕಾರ ಗಮನಹರಿಸಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.