‘ಕಲಾ ಶಿಕ್ಷಣದ ಉನ್ನತೀಕರಣ ಅಗತ್ಯ’ (ಸಂಗತ, ನ. 12) ಎಂಬ ಲೇಖನಕ್ಕೆ ಈ ಪ್ರತಿಕ್ರಿಯೆ: ನಾನು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೆ. ಒಂದು ದಿನ ಒಬ್ಬ ಉಪನ್ಯಾಸಕರು ಗೈರು ಹಾಜರಿದ್ದುದರಿಂದ ಕಲಾ ವಿಭಾಗದ ಮಕ್ಕಳೆಲ್ಲ ಹೋ... ಎಂದು ಗಟ್ಟಿಯಾಗಿ ಕೂಗುತ್ತಾ ಹೊರ ಹೋಗುತ್ತಿದ್ದರು. ಅಲ್ಲೇ ಪಕ್ಕದ ಕೊಠಡಿಯಲ್ಲಿದ್ದ ಒಬ್ಬ ಉಪನ್ಯಾಸಕಿ, ‘ಏಯ್... ಏನಿದು ಅಶಿಸ್ತು... ಆ ಸೈನ್ಸ್ ಮಕ್ಕಳನ್ನ ನೋಡಿ ಕಲೀರೋ. ಅವರ ಪಿಷ್ಟಕ್ಕೆ ಸಮ ನೀವು’ ಎಂದು ಕಿರುಚಲು ಶುರುಮಾಡಿದರು.
ಕಲಾ ವಿಭಾಗದ ಮಕ್ಕಳನ್ನು ಪಿಷ್ಟಕ್ಕೆ ಹೋಲಿಸಿದ್ದರಿಂದ ನನ್ನ ಮನಸ್ಸಿಗೆ ಬೇಸರವಾಯಿತು. ಹೌದು ಅವರಲ್ಲಿ ಸೈನ್ಸ್ ವಿದ್ಯಾರ್ಥಿಗಳಲ್ಲಿ ಇರುವಷ್ಟು ಶಿಸ್ತು ಇರಲಿಲ್ಲ. ಒಳ್ಳೆಯ ಬಟ್ಟೆ ಹಾಕ್ಕೊಂಡು ಬರಲ್ಲ, ಇಂಗ್ಲಿಷ್ ಬರಲ್ಲ, ಪರೀಕ್ಷೆಯಲ್ಲಿ ಅವರಷ್ಟು ಕ್ರಮಬದ್ಧವಾಗಿ, ತಪ್ಪಿಲ್ಲದೆ ಬರೆಯುವುದಿಲ್ಲ... ಅದಕ್ಕಾಗಿ ಅವರನ್ನ ಈ ರೀತಿ ಹೋಲಿಸುವುದೇ? ಆ ಮಕ್ಕಳ ಈ ಸ್ಥಿತಿಗೆ ಯಾರು ಕಾರಣ?
ಈಗಿನ ಸರ್ಕಾರಿ ಶಾಲೆಗಳೆಂದರೆ ಅತಿ ಬಡವರ ಮಕ್ಕಳು ಮಾತ್ರ ಕಲಿಯುವಂಥ ಶಾಲೆಗಳಾಗಿದ್ದು (ನಮ್ಮೂರಿನ ಸರ್ಕಾರಿ ಶಾಲೆಗಳ ಸ್ಥಿತಿ ಹೀಗೆ ಇದೆ), ಅಲ್ಲಿ ಓದಿದ ಮಕ್ಕಳು ಮಾತ್ರ ಕಲಾ ವಿಭಾಗಕ್ಕೆ ಬಂದು ಸೇರಿರುತ್ತಾರೆ. ಲೇಖಕರು ಹೇಳಿರುವಂತೆ ಕಲಾ ವಿಭಾಗಕ್ಕೂ ಅದರದೇ ಆದ ಮಹತ್ವವಿದೆ. ನಾನಂತೂ ಕಲಾ ವಿಭಾಗಕ್ಕೆ ತೆಗೆದುಕೊಂಡ ಮೊದಲ ತರಗತಿಗಳಲ್ಲಿ ಅವರಿಗಿರುವ ಎಲ್ಲಾ ಅವಕಾಶಗಳ ಬಗ್ಗೆ ತಿಳಿಹೇಳಿ, ‘ವಿಜ್ಞಾನ ವಿಷಯ ತೆಗೆದುಕೊಂಡಿರುವ ವಿದ್ಯಾರ್ಥಿಗಳು ಮುಂದೆ ವಿಜ್ಞಾನಿಗಳಾಗಬಹುದು. ಆದರೆ ನೀವು ಈ ಸಮಾಜದ ವಿಜ್ಞಾನಿಗಳಾಗಬೇಕು, ತಪ್ಪು ಮಾಡುವ ಸಮಾಜಘಾತುಕರಿಗೆ ಚಿಕಿತ್ಸೆ ಕೊಡುವ ವೈದ್ಯರಾಗಬೇಕು’ ಎಂದು ಹೇಳಿಯೇ ಮುಂದಿನ ಪಾಠ ಹೇಳುವುದು. 100 ಮಕ್ಕಳಲ್ಲಿ ಒಂದಿಬ್ಬರು ಮಾತ್ರ ಸ್ವಲ್ಪ ಭಿನ್ನ ಇರುತ್ತಾರೆ. ಇದನ್ನು ಅರಿಯುವುದು ಮುಖ್ಯ. ಸಂಬಂಧಿಸಿದವರು ಇತ್ತ ಗಮನ ಹರಿಸಲಿ.
-ಸರೋಜ ಎಂ.ಎಸ್., ಸಾಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.