ಗಿರೀಶ ಕಾರ್ನಾಡ ಅವರ ನಿಧನ ಕರ್ನಾಟಕಕ್ಕೆ ಹಾಗೂ ವಿಶೇಷವಾಗಿ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾಗದ ನಷ್ಟ, ನಿಜ. ಆದರೆ, ಅವರ ನಿಧನದ ನೆಪ ಇಟ್ಟುಕೊಂಡು ಶಾಲಾ– ಕಾಲೇಜು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ನೀಡಿದ್ದು, ಒಬ್ಬ ಪ್ರಬುದ್ಧ ಚಿಂತಕ ಹಾಗೂ ಜ್ಞಾನದಾಹಿಗೆ ಮಾಡಿದ ಅವಮರ್ಯಾದೆಯೆಂದೇ ಹೇಳಬಹುದು. ರಜೆ ಪಡೆದವರೆಲ್ಲ ಮನೆಯಲ್ಲಿ ಕುಳಿತು, ತಮ್ಮ ದುಃಖವನ್ನು ಹೊರಹಾಕಿ ಸಮಾಧಾನ ತಂದುಕೊಳ್ಳುವುದಿಲ್ಲ ಅಥವಾ ಮೃತರಿಗೆ ಅಂತಿಮ ಗೌರವ ಸಲ್ಲಿಸಲು ಹೋಗುವುದಿಲ್ಲ. ಈ ವಿಷಯ ಗೊತ್ತಿದ್ದೂ ರಜೆ ನೀಡುವ ಇಂಥ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದ್ದೇಕೆ?
ಒಬ್ಬ ಮಹಾನ್ ವ್ಯಕ್ತಿ ತೀರಿಕೊಂಡಾಗ ಅವರನ್ನು ನೆನಪಿಸಿಕೊಳ್ಳುವ ಕೆಲಸ ಬರೀ ಟೊಳ್ಳು ಮಾತುಗಳ ಮೂಲಕ ಮತ್ತು ರಜೆ ನೀಡುವ ಮೂಲಕ ಆಗಬಾರದು. ಅದಕ್ಕೆ ಬದಲಾಗಿ, ಆ ದಿನ ಶಾಲಾ– ಕಾಲೇಜುಗಳಲ್ಲಿ ಅವರ ಕೊಡುಗೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದು, ಅವರ ಜೀವನದ ಸಾಕ್ಷ್ಯಚಿತ್ರ ತೋರಿಸುವುದು, ಅವರ ಕೃತಿಗಳ ಶ್ರೇಷ್ಠತೆಯ ಬಗ್ಗೆ ಅರಿವು ಮೂಡಿಸುವುದು ಸೂಕ್ತ. ಸರ್ಕಾರಿ ಕಚೇರಿಗಳಲ್ಲಿ ಸ್ಮರಣೆ ಹಾಗೂ ಶ್ರದ್ಧಾಂಜಲಿ ಸಲ್ಲಿಸುವುದು, ಅವರ ಪ್ರಶಸ್ತಿ ಪುರಸ್ಕೃತ ಕೃತಿಯ ವಾಚನ ಮಾಡುವುದು ಬೌದ್ಧಿಕವಾಗಿಯೂ, ಭಾವನಾತ್ಮಕವಾಗಿಯೂ ಒಳ್ಳೆಯ ಕೆಲಸ. ಅದು ಬಿಟ್ಟು ರಜೆ ನೀಡಿ, ಒಬ್ಬ ಮಹಾನ್ ಸಾಹಿತಿಯ ಹೆಸರಿನಲ್ಲಿ ಒಂದು ದಿನ ಪೋಲು ಮಾಡಲು ಲಕ್ಷಾಂತರ ಜನರಿಗೆ ಅವಕಾಶ ಮಾಡಿಕೊಟ್ಟದ್ದು ಸರ್ಕಾರದ ಅತಾರ್ಕಿಕ ನಿರ್ಧಾರ.
ದೀಪಕ್ ತಿಮ್ಮಯ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.