ADVERTISEMENT

ಜಲಸಾಕ್ಷರತೆಯಿಂದ ಅಪಾರ ಲಾಭ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 15:59 IST
Last Updated 4 ಫೆಬ್ರುವರಿ 2021, 15:59 IST

‘ನೀರಿನ ಕೊರತೆಗಿದೆ ಪರಿಹಾರ’ ಎಂಬ ಲೇಖನದಲ್ಲಿ (ಸಂಗತ, ಫೆ. 3) ಹೇಳಿರುವಂತೆ, ನೀರಿಗೆ ಕೊರತೆ ಇಲ್ಲ. ಜಲಸಾಕ್ಷರತೆ ಇಲ್ಲದಿರುವುದು ನೀರಿನ ಕೊರತೆಗೆ ಕಾರಣವಾಗಿದೆ. ಪ್ರಪಂಚದಲ್ಲಿ ದಕ್ಷಿಣ ಅಮೆರಿಕವನ್ನು ಬಿಟ್ಟರೆ ಅತಿ ಹೆಚ್ಚು ವಾರ್ಷಿಕ ಮಳೆ ಭಾರತದಲ್ಲಿ ಬೀಳುತ್ತದೆ. ಆದರೆ ಈ ನೀರಿನಲ್ಲಿ ಶೇ 15- 20ರಷ್ಟು ಬಳಕೆಯಾಗಿ ಉಳಿದ ನೀರು ಆವಿಯಾಗುತ್ತದೆ ಮತ್ತು ಸಮುದ್ರವನ್ನು ಸೇರುತ್ತದೆ.

ಕೃಷಿಯಲ್ಲಿ ಅತಿ ಹೆಚ್ಚು ನೀರು ಭತ್ತ, ಕಬ್ಬು, ಗೋಧಿ ಬೆಳೆಯಲು ಬಳಕೆಯಾಗುತ್ತಿದೆ. ಈ ಮೂರು ಬೆಳೆಗಳ ಬದಲು ಬೇರೆ ಬೆಳೆಗಳನ್ನು ಬೆಳೆದರೆ ನೀರಿನ ಕೊರತೆ ಇರುವುದಿಲ್ಲ. ವೃಕ್ಷಾಧಾರಿತ ಸಮಗ್ರ ಕೃಷಿ ಮಾಡಿದರೆ ನೀರು ಸಮೃದ್ಧಿ ಆಗುತ್ತದೆ. ಪ್ರವಾಹ ಮತ್ತು ಬರಗಾಲದ ಸ್ಥಿತಿಗೆ ಮರಗಳು ಔಷಧವಾಗಬಲ್ಲವು. ಹನಿ ನೀರಾವರಿಯಿಂದ ನೀರಿನ ಉಳಿತಾಯ ಸಾಧ್ಯ. ಮಳೆ ಬಿದ್ದಾಗ ಮನೆಗಳ ಮೇಲೆ ಬೀಳುವುದನ್ನು ಮನೆಯಲ್ಲಿ, ಹೊಲದ ನೀರು ಹೊಲದಲ್ಲಿ, ಹಳ್ಳಿಯ ನೀರನ್ನು ಹಳ್ಳಿಯಲ್ಲಿ ಸಂಗ್ರಹಿಸಿ, ಸಂರಕ್ಷಿಸಿ ಬಳಕೆ ಮಾಡಿದರೆ ನೀರಿನ ಕೊರತೆ ಇರುವುದಿಲ್ಲ. ಪ್ರತೀ ಮನೆಯ ತಾರಸಿ ಮೇಲೆ ಬೀಳುವ ಮಳೆ ನೀರನ್ನು ಶೋಧಿಸಿ, ಸಂಗ್ರಹಿಸಿ ಬಳಸುವುದರಿಂದ; ಬಟ್ಟೆ ತೊಳೆಯಲು, ಸ್ನಾನ ಮಾಡಲು ಬಳಸುವ ನೀರನ್ನು ಕೈತೋಟ, ಶೌಚಾಲಯ, ವಾಹನ, ಮನೆ ತೊಳೆಯಲು ಪುನರ್ಬಳಕೆ ಮಾಡುವುದರಿಂದ ಕೋಟ್ಯಂತರ ಲೀಟರ್‌ ನೀರನ್ನು ಉಳಿಸಬಹುದು. ಮಳೆ ನೀರನ್ನು ರಾಜಕಾಲುವೆಗಳಲ್ಲಿ ಹರಿಸಿ, ಕೆರೆ ತುಂಬಿಸಿ ಬಳಕೆ ಮಾಡಬಹುದು. ತ್ಯಾಜ್ಯದ ನೀರನ್ನು ಕಾರ್ಖಾನೆಗಳಲ್ಲಿ ಬಳಕೆ ಮಾಡಬಹುದು. ಪಾರ್ಕ್, ಖಾಲಿ ಜಾಗದಲ್ಲಿ ಇಂಗು ಗುಂಡಿ ನಿರ್ಮಿಸಿ, ಗಿಡ ಮರ ಬೆಳೆಸಿ ಅಂತರ್ಜಲ ಹೆಚ್ಚಿಸಬಹುದು.

ಡಾ. ಎಚ್.ಆರ್‌.ಪ್ರಕಾಶ್,ಮಂಡ್ಯ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.