ADVERTISEMENT

ವಾಚಕರ ವಾಣಿ: ಗಣಿಗಾರಿಕೆ ರಾಜ್ಯ ವರಮಾನದ ಪ್ರಮುಖ ಮೂಲವಲ್ಲ!

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 19:30 IST
Last Updated 29 ಆಗಸ್ಟ್ 2022, 19:30 IST

ಗದಗ ಜಿಲ್ಲೆಯ ಕಪ್ಪತಗುಡ್ಡ ವನ್ಯಜೀವಿಧಾಮ ಮತ್ತು ಬಳ್ಳಾರಿ ಜಿಲ್ಲೆ ಗುಡೆಕೋಟೆಯ ಕರಡಿಧಾಮ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಅನುಮತಿ ಕೋರಿ, ರಾಜ್ಯ ವನ್ಯಜೀವಿ ಮಂಡಳಿಗೆ ಪ್ರಸ್ತಾವಗಳು ಸಲ್ಲಿಕೆಯಾಗಿವೆ ಎಂದು ವರದಿಯಾಗಿದೆ (ಪ್ರ.ವಾ., ಆ. 29). ಕರ್ನಾಟಕದಲ್ಲಿ ಗಣಿಗಾರಿಕೆಯು ಜಿಎಸ್‍ಡಿಪಿಯ ಪ್ರಮುಖ ಮೂಲವಲ್ಲ. ಉದಾಹರಣೆಗೆ, ರಾಜ್ಯದ ಜಿಎಸ್‍ಡಿಪಿಗೆ 2020-21ರಲ್ಲಿ ಅರಣ್ಯಗಾರಿಕೆ- ದಿಮ್ಮಿ ಆರ್ಥಿಕತೆ ಹಾಗೂ ಮೀನುಗಾರಿಕೆಯ ಕೊಡುಗೆ ಕ್ರಮವಾಗಿ ₹ 9,872 ಕೋಟಿ ಮತ್ತು ₹ 5261 ಕೋಟಿ (ಒಟ್ಟು ₹ 15,133 ಕೋಟಿ). ಆದರೆ ಗಣಿಗಾರಿಕೆ ಮತ್ತು ಕಲ್ಲುಗಣಿಗಳಿಂದ 2020–21ರಲ್ಲಿ ಬಂದ ವರಮಾನ ₹ 6,568 ಕೋಟಿ. ಅಪಾರ ವರಮಾನ ನೀಡುವ ಅರಣ್ಯಗಳನ್ನು ನಾಶ ಮಾಡಿ, ಮೀನುಗಾರಿಕೆಯನ್ನು ನಿರ್ಲಕ್ಷಿಸಿ ಗಣಿಗಾರಿಕೆಗೆ ಸರ್ಕಾರ ಏಕೆ ಇಷ್ಟೊಂದು ಮಹತ್ವ ನೀಡುತ್ತಿದೆ?

ಪರಿಸರ, ವನ್ಯಮೃಗಗಳ ಆವಾಸಸ್ಥಾನ ಹಾಗೂ ಜಲಮೂಲಗಳ ನಾಶ ಮಾಡುವ ಗಣಿಗಾರಿಕೆಗೆ ಬದಲಾಗಿ ಉದ್ಯೋಗಸಾಂದ್ರ, ಪರಿಸರಸ್ನೇಹಿ, ಜನರ ಆಹಾರದ ಮೂಲವಾಗಿರುವ ಮತ್ತು ಆರ್ಥಿಕತೆಗೆ ಅಧಿಕ ವರಮಾನ ನೀಡುವ ಮೀನುಗಾರಿಕೆ ಮತ್ತು ಅರಣ್ಯಗಾರಿಕೆಗಳನ್ನು ಪ್ರೋತ್ಸಾಹಿಸಲು ಸರ್ಕಾರ ಕ್ರಮ ತೆಗೆದುಕೊಳ್ಳುವುದು ಸೂಕ್ತ. ಎಲ್ಲಕ್ಕಿಂತ ಮುಖ್ಯವಾಗಿ ಅರಣ್ಯಗಾರಿಕೆ ಮತ್ತು ಮೀನುಗಾರಿಕೆಯು ‘ನವೀಕರಿಸಬಹುದಾದ’ ಸಂಪನ್ಮೂಲಗಳು. ಮೇಲಾಗಿ ಇವು ಅಂತರ-ತಲೆಮಾರು ಸಮಾನತೆಯನ್ನು ಪೋಷಿಸುವ ಸಂಪನ್ಮೂಲಗಳು. ಗಣಿಗಾರಿಕೆಯು ನವೀಕರಿಸಲು ಬಾರದ ಸಂಪನ್ಮೂಲ ಮತ್ತು ಇಲ್ಲಿ ಅಂತರ-ತಲೆಮಾರಿನ ನ್ಯಾಯಕ್ಕೆ ಅವಕಾಶವಿಲ್ಲ. ಅರಣ್ಯ ಮತ್ತು ಪರಿಸರಸೂಕ್ಷ್ಮ ಪ್ರದೇಶದಲ್ಲಿ ಗಣಿಗಾರಿಕೆಗೆ ಆರ್ಥಿಕವಾಗಿ, ಸುಸ್ಥಿರ ಅಭಿವೃದ್ಧಿ ದೃಷ್ಟಿಯಿಂದ ಮತ್ತು ಉದ್ಯೋಗ- ಆಹಾರ ನೆಲೆಯಿಂದಲೂ ಅನುಮತಿ ನೀಡುವುದು ಸರಿಯಲ್ಲ.

-ಟಿ.ಆರ್.ಚಂದ್ರಶೇಖರ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT