ನಾಗೇಶ ಹೆಗಡೆ ಅವರ ‘ಕೈಗಾಎಂಬ ನಿರಂತರ ಕೆಂಡ’ ಲೇಖನದಲ್ಲಿ ವಿಜ್ಞಾನಕ್ಕಿಂತ ಉತ್ಪ್ರೇಕ್ಷೆಯೇ ಜಾಸ್ತಿಯಾಯಿತು ಎಂದಿದ್ದಾರೆ ಮಹಾಂತೇಶ ಗಂಗಯ್ಯ ಓಶಿಮಠ (ವಾ.ವಾ., ಡಿ. 17). ಯುರೇನಿಯಂ ಗಣಿಗಳ ಸುತ್ತ ಕ್ಯಾನ್ಸರ್‌ನಂಥ ವಿಕಿರಣ ಸಂಬಂಧಿ ಕಾಯಿಲೆಗಳು,ತ್ವರಿತ ಸಾವು,ಷಂಡತ್ವ,ಬಂಜೆತನ,ವಿರೂಪ ಸಂತಾನ... ಇವು ಯಾವೂ ಉತ್ಪ್ರೇಕ್ಷೆಯಲ್ಲ, ಕಟುವಾಸ್ತವ.
‘ಅಣುಶಕ್ತಿ ಕಾರ್ಯಕ್ರಮಗಳಿಂದ ನಮಗೆ ವಿದ್ಯುತ್ ಜೊತೆಗೆ ಕ್ಯಾನ್ಸರ್ ರೋಗವನ್ನು ಹೊಡೆದೋಡಿಸಲು ಬೇಕಾಗುವಕೊಬಾಲ್ಟ್ ಸಹ ಸಿಗುತ್ತದೆ’ ಎಂದಿದ್ದಾರೆ ಮಹಾಂತೇಶ. ಗೊತ್ತು ಸ್ವಾಮಿ. ಆದರೆಕ್ಯಾನ್ಸರ್ ರೋಗಕ್ಕೆ ಮದ್ದಾದಕೊಬಾಲ್ಟ್ ಸಿಗುತ್ತದೆಎಂಬ ಕಾರಣಕ್ಕೆ ಕ್ಯಾನ್ಸರ್, ಇನ್ನಿತರ ವಿಕಿರಣ ಸಂಬಂಧಿ ಕಾಯಿಲೆಗಳಿಗೆ ಮತ್ತಷ್ಟು ಕಾರಣವಾಗುವ ಯುರೇನಿಯಂ ಗಣಿಗಾರಿಕೆ ಮತ್ತು ಅಣುಸ್ಥಾವರಗಳಿಗೆ ಅವಕಾಶ ಕಲ್ಪಿಸಬೇಕಿದೆಯೇ?
ಯಂತ್ರೋಪಕರಣಗಳ ವಿಕಿರಣ,ಸ್ಫೋಟ,ಕೊಡಸಳ್ಳಿ ಅಣೆಕಟ್ಟು ಒಡೆಯುವ ಭಯ ಹಾಗೂ ಭೂಕುಸಿತಗಳಂತಹ ಗುಮ್ಮಗಳನ್ನುಹೆಗಡೆಯವರುಜನರ ಮನದಲ್ಲಿ ಸೃಷ್ಟಿಸಿರುವುದುಬೇಸರದವಿಷಯಎಂದು ಅವರುಅಲವತ್ತುಕೊಂಡಿದ್ದಾರೆ. ಹೆಗಡೆಯವರು ಹೇಳಿರುವ ಅಂಶಗಳು ಗುಮ್ಮನಲ್ಲ, ಸುಡುಕೆಂಡ. ಚರ್ನೋಬಿಲ್ ಮತ್ತು ಫುಕುಶಿಮಾ ಸ್ಫೋಟದ ದುರಂತ ಆಗುವವರೆಗೂ ಅಣುಸ್ಥಾವರಗಳು ಎಂದರೆ ಶಾಂತ ವಿದ್ಯುತ್ ಉತ್ಪಾದನಾ ಕೇಂದ್ರಗಳು ಎಂದೇ ಆ ದೇಶಗಳು ಜನರನ್ನು ನಂಬಿಸಿಕೊಂಡು ಬಂದಿದ್ದವು. ಯುರೇನಿಯಂ ಶಾಂತ ಪರಮಾಣು ಅಲ್ಲ.
1994ರ ಮೇ 13ರಂದು ಇದೇ ಕೈಗಾ ಸ್ಥಾವರದ 1ನೇ ಘಟಕದ ಗುಮ್ಮಟ ಕುಸಿದು, 150 ಟನ್‍ಗಳಷ್ಟು ಕಾಂಕ್ರೀಟು 75 ಅಡಿ ಮೇಲಿನಿಂದ ಕೆಳ ಬಿದ್ದಿತ್ತು. ಅದೃಷ್ಟವಶಾತ್ ಆಗ ಕೆಲಸಗಾರರು ಊಟಕ್ಕೆ ಹೋಗಿದ್ದರಿಂದ ಪ್ರಾಣಾಪಾಯ ಆಗಿರಲಿಲ್ಲ. ಇದೇ ಕೈಗಾದಲ್ಲಿ 2009ರ ನವೆಂಬರಿನಲ್ಲಿ ಭಾರಜಲ ಸೋರಿಕೆಯಾಗಿ 100ಕ್ಕೂ ಹೆಚ್ಚು ಕೆಲಸಗಾರರು ವಿಕಿರಣಕ್ಕೀಡಾಗಿದ್ದರು. ಯಾವುದೇ ಅಣುಸ್ಥಾವರವು 100% ಸುರಕ್ಷಿತ ಎಂದು ಜನರನ್ನು ನಂಬಿಸಲು ಮಾಡುವ ಸರ್ಕಸ್ ಒಂದು ದೊಡ್ಡ ಪ್ರಹಸನ ಅಷ್ಟೇ. ಅಭಿವೃದ್ಧಿ ಬೇಕು. ಆದರೆ ಬುಡಕಟ್ಟು ನಿವಾಸಿಗಳು, ಹಳ್ಳಿಗರು, ಕೆಳಹಂತದ ಕಾರ್ಮಿಕರು ಮತ್ತು ಸುತ್ತಲಿನ ಪರಿಸರವನ್ನು ವಿಕಿರಣದ ದುಷ್ಪರಿಣಾಮಗಳಿಗೆ ಬಲಿ ಕೊಟ್ಟು ಅಲ್ಲ.
ಸುಮಂಗಲಾ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.